

ಬೀದರ್: ಅತಿವೃಷ್ಟಿಯಿಂದ ಹಾನಿ ಸಂಭವಿಸಿದ ಕಡೆಗಳಲ್ಲಿ ತುರ್ತು ಕಾಮಗಾರಿಗಳನ್ನು ಶೀಘ್ರ ಆರಂಭಿಸುವಂತೆ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಪ್ರಕೃತಿ ವಿಕೋಪ ಅನುದಾನದಡಿ ಸರ್ಕಾರ ಈಗಾಗಲೇ 18.35 ಕೋಟಿ ರೂ. ಬಿಡುಗಡೆ ಮಾಡಿದೆ. ಅತಿವೃಷ್ಟಿಯಿಂದ ಹಾನಿಯಾದ ಸೇತುವೆ, ಗ್ರಾಮೀಣ ರಸ್ತೆ, ಟ್ರಾನ್ಸ್‌ಫರ್ಮರ್ ದುರಸ್ತಿ, ಶಾಲಾ ಕೋಣೆ, ಅಂಗನವಾಡಿ ಕಟ್ಟಡ, ವಿದ್ಯುತ್ ಕಂಬ ದುರಸ್ತಿ ಹೀಗೆ ಅಗತ್ಯವಿರುವ ಕೆಲಸಗಳ ಬಗ್ಗೆ ಕ್ರಿಯಾಯೋಜನೆ ಸಿದ್ದಪಡಿಸಬೇಕು. ಅನುಮತಿ ಪಡೆದು ಕಾಮಗಾರಿಗಳು ಕೈಗೆತ್ತಿಕೊಳ್ಳಲು ಸೂಚಿಸಿದರು.
ಕಾರಂಜಾ ಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ. ಇಂಥ ರೈತರಿಗೆ ಪರಿಹಾರ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಲು ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಬೇಕು. ಇಲ್ಲವೇ ಕ್ಲಸ್ಟರ್ ಮಾದರಿಯಲ್ಲಿ ಘಟಕ ಸ್ಥಾಪಿಸಲು ನಿವೇಶನ ಒದಗಿಸಲು ಕ್ರಮ ವಹಿಸಬೇಕು ಎಂದು ಎಲ್ಲ ತಹಸೀಲ್ದಾರರಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬಸವಕಲ್ಯಾಣ ಎಸಿ ಭುವನೇಶ ಪಾಟೀಲ್ ಹಾಗೂ ಎಲ್ಲ ತಾಲೂಕು ತಹಸೀಲ್ದಾರರು, ತಾಪಂ ಇಒ, ಲೋಕೋಪಯೋಗಿ, ಸಾರ್ವಜನಿಕ ಶಿಕ್ಷಣ, ಆರೋಗ್ಯ, ಗ್ರಾಮೀಣ ಕುಡಿಯುವ ನೀರು ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.