ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ಶೀಘ್ರ ವಿತರಿಸಿ

Basavraj Bommai 55
Published on

ಹಾವೇರಿ: ಜಿಲ್ಲೆಯಲ್ಲಿನ ಅತಿವೃಷ್ಟಿ ಹಾಗೂ ನೆರೆ ಹಾನಿ ಸಮೀಕ್ಷೆ ಮಾಹಿತಿಯನ್ನು ತ್ವರಿತವಾಗಿ ತಂತ್ರಾಂಶದಲ್ಲಿ ಅಳವಡಿಸಿ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಶೀಘ್ರ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರಸಕ್ತ ಸಾಲಿನಲ್ಲಿ ಮಳೆಯಿಂದ ಹಾನಿಯಾದ ಮನೆಗಳು ಹಾಗೂ ಬೆಳೆ ಹಾನಿ ಪರಿಹಾರ ಕ್ರಮಗಳ ಕುರಿತು ಮಾಹಿತಿ ಪಡೆದರು.

2019-20ನೇ ಸಾಲಿನಲ್ಲಿ ಬೆಳೆ ಪರಿಹಾರ ವಿತರಣೆಯಲ್ಲಿ ನಡೆದಿರುವ ಲೋಪ ಕುರಿತಂತೆ ಕೈಗೊಂಡಿರುವ ಪೊಲೀಸ್ ತನಿಖೆಯ ಪ್ರಗತಿಯ ಮಾಹಿತಿ ಪಡೆದ ಸಚಿವರು, ಆದಷ್ಟು ಬೇಗ ತನಿಖಾ ಕಾರ್ಯ ಪೂರ್ಣಗೊಳಿಸಬೇಕು. ಇದರಿಂದ ಅರ್ಹರಿಗೆ ಪರಿಹಾರ ವಿತರಣೆಗೆ ಅನುಕೂಲವಾಗಲಿದೆ. ತನಿಖೆಯ ವಿಳಂಬದಿಂದ ಅಂದಾಜು 10 ಸಾವಿರ ರೈತರು ಪರಿಹಾರ ಪಡೆಯಲು ತಡವಾಗುತ್ತಿದೆ. ಆದ್ದರಿಂದ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ್ ಅವರಿಗೆ ಸೂಚಿಸಿದರು.

ಮರಣ ಪ್ರಮಾಣ ತಗ್ಗಿಸಲು ಸೂಚನೆ: ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಆರ್​ಟಿಪಿಸಿಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಲು ಸೂಚಿಸಿದರು. ಕರೊನಾ ನಿಯಂತ್ರಣ ಹೆಚ್ಚು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಕೋವಿಡ್ ಸೋಂಕಿನಿಂದ ಮರಣ ಹೊಂದುವವರ ಸಂಖ್ಯೆ ಶೇ.1.8 ರಷ್ಟಿದೆ. ಈ ಪ್ರಮಾಣ ಮತ್ತಷ್ಟು ತಗ್ಗಿಸಲು ತೀವ್ರ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ರಮೇಶ ದೇಸಾಯಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net