

ಬೀದರ್: ಕಾರಂಜಾ ಜಲಾಶಯದಲ್ಲಿ ಮುಳುಗಡೆಯಾಗಿರುವ ಹೆಚ್ಚುವರಿ ಜಮೀನುಗಳಲ್ಲಿ ಅತಿವೃಷ್ಟಿಯಿಂದ ನಾಶವಾದ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಗುರುವಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ ನೇತೃತ್ವದ ನಿಯೋಗ ಡಿಸಿ ರಾಮಚಂದ್ರನ್ ಅವರಿಗೆ ಭೇಟಿಯಾಗಿ ಮನವಿಪತ್ರ ಸಲ್ಲಿಸಿ, ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಕಾರಂಜಾ ಹೆಚ್ಚುವರಿ ಭೂಮಿಯಲ್ಲಿ ಬೆಳೆದಿದ್ದ ಕಬ್ಬು ಸೇರಿ ಇತರೆ ಬೆಳೆಗಳು ಪೂರ್ಣ ಹಾಳಾಗಿವೆ. ಜಮೀನುಗಳು ಫಲವತ್ತತೆ ಕಳೆದುಕೊಂಡು ಮುಂದಿನ ಐದು ವರ್ಷದವರೆಗೆ ಕಬ್ಬಿನ ಲಾವಣಿ ಮಾಡಲು ಆಗುವುದಿಲ್ಲ. ಇತರೆ ಬೆಳೆಗಳನ್ನು ಬೆಳೆಯಲು ಭೂಮಿ ಫಲವತ್ತಾಗಿಲ್ಲ. ಹೀಗಾಗಿ ಕೂಡಲೇ ಸರ್ವೇ ಮಾಡಿಸಿ, ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಹೆಚ್ಚುವರಿ ಜಮೀನು ಸರ್ವೇ ಮಾಡಿಸಿ ಕಾನೂನಿನ ಚೌಕಟ್ಟಿನಲ್ಲಿ ಸಿಗಬಹುದಾದ ಪರಿಹಾರವನ್ನು ನೀಡಲು ತುರ್ತು ಕ್ರಮ ಕೈಗೊಳ್ಳಲಾಗುವುದು. ಸರ್ವೇಯಲ್ಲಿ ಲೋಪದೋಷ ಕಂಡುಬಂದರೆ ಖುದ್ದಾಗಿ ಪರಿಶೀಲಿಸುವೆ. ರೈತರ ಬೆನ್ನಿಗೆ ಸರ್ಕಾರವಿದೆ ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ವೀರಭದ್ರಪ್ಪ ಉಪ್ಪಿನ್, ಬಸವರಾಜ ಮೂಲಗೆ, ಶಂಕರರಾವ ದೇವಣ್ಣನೊರ್, ನಾಗಶೆಟ್ಟೆಪ್ಪ ಹಚ್ಚಿ, ಶಂಕರರಾವ ಗುಂಡಪ್ಪ, ಮಾಣಿಕ ದೇವಣ್ಣನೊರ್, ವೀರಶೆಟ್ಟಿ, ರಮೇಶರೆಡ್ಡಿ, ಸಿದ್ರಾಮಪ್ಪ, ಅರ್ಜುನ, ಮಲ್ಲಶೆಟ್ಟಪ್ಪ, ಸೂರ್ಯಕಾಂತ ಲಾಲಪ್ಪ, ಸಲೀಮಾ ಬೇಗಂ, ಮಹೇಶ, ಚಂದ್ರಶೇಖರ ಮುತ್ತಣ್ಣ, ಕರಬಸಪ್ಪ ಇತರರಿದ್ದರು.
ಕಾರಂಜಾ ಜಲಾಶಯದಲ್ಲಿ ಮನೆ, ಹೊಲ ಕಳೆದುಕೊಂಡ ಸಂತ್ರಸ್ತರು ವೈಜ್ಞಾನಿಕ ಪರಿಹಾರಕ್ಕಾಗಿ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ. ಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಅನಿವಾರ್ಯ.| ಚಂದ್ರಶೇಖರ ಪಾಟೀಲ್ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ