

ಬೀದರ್: ಮಹಾಮಾರಿ ಕರೊನಾ ಜತೆಗೆ ಅತಿವೃಷ್ಟಿ ತಂದಿಟ್ಟ ಸಂಕಷ್ಟದ ಮಧ್ಯೆಯೂ ಜಿಲ್ಲೆಯ ರೈತರು ಹಿಂಗಾರು ಹಂಗಾಮಿನ ಭರದ ಬಿತ್ತನೆಯಲ್ಲಿ ತೊಡಗಿದ್ದಾರೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ವ್ಯಾಪಕ ಮಳೆ ಸುರಿದ ಕಾರಣ ಜಮೀನಿನಲ್ಲಿ ಭರಪೂರ ತೇವಾಂಶವಿದ್ದು, ಹಿಂಗಾರು ಹಂಗಾಮಿನ 1.08 ಲಕ್ಷ ಹೆಕ್ಟೇರ್ ಗುರಿ ಪೈಕಿ ಶೇ.80ಕ್ಕೂ ಅಧಿಕ ಬಿತ್ತನೆಯಾಗಿದೆ.
ಭಾರಿ ಮಳೆಯಿಂದ ಮುಂಗಾರಿನ ಬಹುತೇಕ ಬೆಳೆಗಳು ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಹಿಂಗಾರು ಬೆಳೆಗಳ ಮೇಲೆ ನಿಸರ್ಗದೇವತೆ ಕೃಪೆ ತೋರಲಿ ಎಂಬ ಆಶಾವಾದದೊಂದಿಗೆ ಅನ್ನದಾತರು ಬಿತ್ತನೆಯಲ್ಲಿ ತೊಡಗಿದ್ದಾರೆ. ಕೃಷಿ ಇಲಾಖೆ ರೈತರಿಗೆ ಅಗತ್ಯ ಬೀಜ, ಗೊಬ್ಬರ ದಾಸ್ತಾನು ಮಾಡಿ ವಿತರಿಸುವ ಕೆಲಸ ಮಾಡುತ್ತಿದೆ. ಅತಿವೃಷ್ಟಿಯಿಂದ ಮುಂಗಾರು ಮಣ್ಣು ಪಾಲಾದರೂ ಹೊಸ ಭರವಸೆ, ಆಶಾಭಾವನೆಯೊಂದಿಗೆ ರೈತರು ಹಿಂಗಾರಿಗೆ ಸೈ ಎಂದಿದ್ದಾರೆ. ಈ ಬೆಳೆ ಮೇಲೆ ಸಾಕಷ್ಟು ಆಸೆಯೂ ಇಟ್ಟುಕೊಂಡಿದ್ದಾರೆ. ಸದ್ಯ ಭೂಮಿಯಲ್ಲಿ ತೇವಾಂಶ ಉತ್ತಮವಾಗಿದೆ. ಇನ್ನೊಂದು ವಾರದೊಳಗೆ ಬಿತ್ತನೆ ಪೂರ್ಣವಾಗುವ ಸಾಧ್ಯತೆಗಳಿವೆ.
ಹೀಗಿದೆ ಕ್ಷೇತ್ರವಾರು ಬಿತ್ತನೆ
ಜಿಲ್ಲೆಯ ಹಿಂಗಾರು ಹಂಗಾಮಿನಲ್ಲಿ 1,08,500 ಹೆಕ್ಟೇರ್ ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯ ಹಿಂಗಾರಿನ ಒಟ್ಟು ಬಿತ್ತನೆ ಪೈಕಿ ಅರ್ಧದಷ್ಟು ಪ್ರದೇಶ ಕಡಲೆಗೆ ಮೀಸಲಾಗಿದೆ. 64 ಸಾವಿರ ಹೆಕ್ಟೇರ್ ನಲ್ಲಿ ಕಡಲೆ ಬಿತ್ತನೆ ಮಾಡಲಾಗುತ್ತಿದೆ. ಗೋಧಿ 8000 ಹೆಕ್ಟೇರ್, ಸೂರ್ಯಕಾಂತಿ 500, ಕುಸುಬೆ 10 ಸಾವಿರ, ಅಗಸಿ 500, ಸಾಸಿವೆ 50 ಹೆಕ್ಟೇರ್ ನಲ್ಲಿ ಬಿತ್ತುವ ಗುರಿಯಿದೆ. ಇದರಲ್ಲಿ ಏಕದಳ 33 ಸಾವಿರ, ದ್ವಿದಳ 64,450, ಎಣ್ಣೆ ಕಾಳು 11,050 ಹೆಕ್ಟೇರ್ ಬಿತ್ತನೆ ಗುರಿಯಿದೆ ಎಂದು ಕೃಷಿ ಇಲಾಖೆ ಮೂಲಗಳು ವಿವರಿಸಿವೆ.
ವಿವಿಧ ಬೀಜಗಳಿಗೆ ಸಹಾಯಧನ
ಕಡಲೆ, ಜೋಳ ಸೇರಿ ವಿವಿಧ ಬೀಜಗಳನ್ನು ಕೃಷಿ ಇಲಾಖೆ ಸಬ್ಸಿಡಿಯಲ್ಲಿ ವಿತರಿಸುತ್ತಿದೆ. 1 ಕೆಜಿ ಕಡಲೆಗೆ 70 ರೂ. ಹಾಗೂ ಜೋಳಕ್ಕೆ 57 ರೂ. ದರ ಸರ್ಕಾರ ನಿಗದಿಪಡಿಸಿದೆ. 1 ಕೆಜಿ ಕಡಲೆಗೆ ಎಸ್ಸಿ, ಎಸ್ಟಿ ರೈತರಿಗೆ 37.50 ರೂ., ಸಾಮಾನ್ಯ ರೈತರಿಗೆ 25 ರೂ. ಸಹಾಯಧನ ಸಿಗಲಿದೆ. ಜೋಳಕ್ಕೆ ಎಸ್ಸಿ, ಎಸ್ಟಿಗೆ 30, ಸಾಮಾನ್ಯ ರೈತರಿಗೆ 20 ರೂ. ಸಹಾಯಧನ ಸಿಗಲಿದೆ. ಗೋಧಿ, ಕುಸುಬೆ ಬೀಜಕ್ಕೂ ಸಹಾಯಧನ ನೀಡಲಾಗುತ್ತಿದೆ. ರೈತ ಸಂಪರ್ಕ ಕೇಂದ್ರದಿಂದ ವಿತರಣೆಗೆ ವ್ಯವಸ್ಥೆ ಮಾಡಿದ್ದು, ಗರಿಷ್ಠ 5 ಎಕರೆಗೆ ಬೇಕಾಗುವ ಬೀಜ ನೀಡಲು ಕ್ರಮ ಕೈಗೊಳ್ಳಲಾಗಿದೆ.
ರೈತರಿಗೆ ಹಿಂಗಾರು ಹಂಗಾಮಿಗೆ ಬೇಕಾಗುವಷ್ಟು ಅಗತ್ಯ ಪ್ರಮಾಣದ ಬೀಜ ಮತ್ತು ರಸಗೊಬ್ಬರಗಳನ್ನು ಕೃಷಿ ಇಲಾಖೆ ಪೂರೈಸಿದೆ. ಬಿತ್ತನೆ ಕಾರ್ಯ ಭರದಿಂದ ನಡೆದಿದೆ. ಈವರೆಗೆ ಶೇ.80ಕ್ಕೂ ಅಧಿಕ ಬಿತ್ತನೆ ನಡೆದಿದೆ. ಬೀಜ ಮತ್ತು ಗೊಬ್ಬರದ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ.| ಜಿ.ಎಚ್. ತಾರಾಮಣಿಜಂಟಿ ಕೃಷಿ ನಿರ್ದೇಶಕಿ
ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಅತಿವೃಷ್ಟಿಯಿಂದ ಜಿಲ್ಲೆಯ ರೈತರು ತತ್ತರಿಸಿದ್ದಾರೆ. ಹಿಂಗಾರು ಹಂಗಾಮು ಬಿತ್ತನೆಗೆ ಹಣವಿಲ್ಲದೆ ಹೈರಾಣಾಗಿದ್ದಾರೆ. ಸರ್ಕಾರ ರೈತರಿಗೆ ಕೂಡಲೇ ಬೆಳೆ ಹಾನಿ ಪರಿಹಾರ ಕೊಟ್ಟು ನೆರವಿಗೆ ಬರಬೇಕು.| ಸುನೀಲ ಪತ್ರಿ ಹುಮನಾಬಾದ್ರೈತ ಸಂಘ ಮತ್ತು ರೈತ ಸೇನೆ ಜಿಲ್ಲಾಧ್ಯಕ್ಷ