ಅತಿದೊಡ್ಡ ವಸ್ತು ಪ್ರದರ್ಶನ, ಮೇಳ ಆರಂಭ

IMG-20220915-WA0084
Published on

ಕಲಬುರಗಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ-2022 ಅಂಗವಾಗಿ ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಸೆ.15 ರಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಕಲ್ಯಾಣ ಕರ್ನಾಟಕದ ಅತಿದೊಡ್ಡ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಗುರುವಾರ ಕಲ್ಯಾಣ ಕನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ ಅವರು ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳಿಗೆಗಳನ್ನು ವೀಕ್ಷಿಸಿದರು.

ಇದು ಮೊಟ್ಟ ಮೊದಲ ಬಾರಿಗೆ ಕಲಬುರಗಿ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ 200ಕ್ಕೂ ಹೆಚ್ಚಿನ ಮಳಿಗೆಯ ವೈವಿಧ್ಯಮಯ ವಸ್ತು ಪ್ರದರ್ಶನ ಮತು ಮಾರಾಟ ಮೇಳ ಆಯೋಜಿಸಿದ್ದು, ಕಲಬುರಗಿ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಸ್ಥಳೀಯವಾಗಿ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿದಲ್ಲಿ ದೇಶದಲ್ಲಿ 10 ಕೋಟಿ ಜನರ ಉದ್ಯೋಗ ಸಮಸ್ಯೆ ನಿವಾರಿಸಬಹುದಾಗಿದೆ ಎಂದರು.

ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಮಾತನಾಡಿ, ಈ ಭಾಗದ ಜಿಲ್ಲೆಗಳ ಭೌಗೋಳಿಕ ಮತ್ತು ಸ್ಥಳೀಯವಾಗಿ ಮಹತ್ವ ಪಡೆದಿರುವ ವಸ್ತುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯರು ತಯಾರು ಮಾಡಿರುವ ವಸ್ತುಗಳಾದ ಕೈಮಗ್ಗ, ಬಟ್ಟೆ, ತಿಂಡಿ-ತಿನಿಸುಗಳನ್ನು ಖರೀದಿಸುವ ಮೂಲಕ ಸ್ಥಳೀಯರಿಗೆ ಪ್ರೋತ್ಸಾಹಿಸಬೇಕಿದೆ. ಸೆ.17 ರಂದು ಮುಖ್ಯಮಂತ್ರಿಗಳು ಈ ಮಾರಾಟ ಮೇಳವನ್ನು ಉದ್ಘಾಟಿಸಲಿದ್ದಾರೆ. ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಮಾರಾಟ ಮೇಳ ಇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಬಂದು ವಸ್ತು, ಉತ್ಪನ್ನಗಳು ಖರೀದಿಸಬೇಕೆಂದರು.

ವೋಕಲ್ ಫಾರ್ ಲೋಕಲ್ ಮಂತ್ರ ಅಳವಡಿಸಿಕೊಳ್ಳಿ:

ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಮ್ಮೆಯ ಈ ಕ್ಷಣದಲ್ಲಿ 200ಕ್ಕೂ ಹೆಚ್ಚಿನ ಮಳಿಗೆಯ ಕಲ್ಯಾಣ ಕರ್ನಾಟಕದ ಅತಿದೊಡ್ಡ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇಲ್ಲಿ ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ “ವೋಕಲ್ ಫಾರ್ ಲೋಕಲ್” ಮಂತ್ರ ಅಳವಡಿಸಿಕೊಂಡು ಸ್ಥಳೀಯರಿಗೆ ಪ್ರೋತ್ಸಾಹಿಸುವ ಮೂಲಕ ಆತ್ಮ ನಿರ್ಭರ ಭಾರತದತ್ತ ಸಾಗಬೇಕಿದೆ. ಗೃಹ ಉತ್ಪನ್ನ ವಸ್ತುಗಳು, ಮಹಿಳಾ ಸ್ವ-ಸಹಾಯ ಗುಂಪುಗಳು ತಯ್ಯಾರಿಸಿರುವ ಸ್ಥಳೀಯ ಉತ್ಪನ್ನ, ಪದಾರ್ಥಗಳನ್ನು ಕಲಬುರಗಿ ನಿವಾಸಿಗಳು ಖರೀದಿಸಬೇಕು. ಇದೊಂದು ಸುವರ್ಣಾವಕಾಶ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿಗಳಾಗಿರುವ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಂದು 7 ಜಿಲ್ಲೆಗಳ ಫಲಾನುಭವಿಗಳು ಭಾಗಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಎಲ್ಲಾ ಪೂರ್ವಸಿದ್ಧತೆಗಳು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾತನಾಡಿ, ಸ್ಥಳೀಯರಿಗೆ ನೆರವಾಗಲೆಂದೆ ಬೃಹತ್ ವಸ್ತು ಪ್ರದರ್ಶನ ಮೇಳ ಆಯೋಜಿಸಿದೆ. ಪ್ರದೇಶದ ವಿವಿಧ ಜಿಲ್ಲೆಗಳಿಂದ ಮಳಿಗೆ ಹಾಕಲು ಉದ್ಯಮಿಗಳು, ಸಂಘ-ಸಂಸ್ಥೆಗಳು ಮುಂದೆ ಬಂದಿರುವುದು ಸಂತಸ ತಂದಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಜೆಸ್ಕಾಂ ಎಂ.ಡಿ. ರಾಹುಲ ಪಾಂಡ್ವೆ, ಕೆ.ಕೆ.ಆರ್.ಡಿ.ಬಿ. ಉಪ ಕಾರ್ಯದರ್ಶಿ ಆನಂದ ಪ್ರಕಾಶ ಮೀನಾ, ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕ ಮಾಣಿಕರಾವ ರಘೋಜಿ ಮತ್ತಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net