ಅತಿಥಿ ಶಿಕ್ಷಕರನ್ನು ನೇಮಿಸಲಿ

29Npn1
Published on

ನಿಪ್ಪಾಣಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೬೦ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವುದನ್ನು ಪರಿಗಣಿಸಿ ಅನುದಾನಿತ ಪ್ರೌಢಶಾಲೆಗಳ ಸಹಶಿಕ್ಷಕರ ವಾರ್ಷಿಕ ವೇತನ ಬಡ್ತಿ ತಡೆಹಿಡಿಯಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದ್ದು, ಈ ಆದೇಶವನ್ನು ಕೂಡಲೇ ಕೈಬಿಡಬೇಕು ಎಂದು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಚಿಕ್ಕೋಡಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆದಮ್‌ಅಲಿ ಪೀರಜಾದೆ ಒತ್ತಾಯಿಸಿದರು.

ಪಟ್ಟಣದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿಯ ಉಪನಿರ್ದೇಶಕ ಆರ್.ಎಸ್.ಸೀತಾರಾಮು ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆಗೆ ಪ್ರಮುಖ ಕಾರಣವಾಗಿದೆ. ರಾಜ್ಯದ ಪ್ರೌಢಶಾಲೆಗಳಲ್ಲಿ ನಿವೃತ್ತಿ, ಮರಣ ಹಾಗೂ ಸ್ವನಿವೃತ್ತಿ ಕಾರಣಗಳಿಂದಾಗಿ ಅನೇಕ ಹುದ್ದೆಗಳು ಖಾಲಿಯಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸುವಂತೆ ಅನುದಾನಿತ ಶಾಲೆಗಳಲ್ಲೂ ಅತಿಥಿ ಶಿಕ್ಷಕರನ್ನು ನೇಮಿಸಿದರೆ ಸಮಸ್ಯೆಗೆ ಪರಿಹಾರ ದೊರೆಯಲಿದೆ. ನೇರವಾಗಿ ಶಿಕ್ಷಕರನ್ನು ಹೊಣೆ ಮಾಡಿದರೆ ಘೋರ ಅನ್ಯಾಯವಾಗಲಿದೆ ಎಂದರು.

ಸಂಘಟನೆ ಅಧ್ಯಕ್ಷ ಜಿನೇಂದ್ರ ನಿಲಜಗಿ ಮಾತನಾಡಿ, ಫಲಿತಾಂಶ ಕಡಿಮೆಯಾಗಲು ಕೇವಲ ಪ್ರೌಢಶಾಲೆ ಶಿಕ್ಷಕರು ಮಾತ್ರ ಕಾರಣವಲ್ಲ. ವಿದ್ಯಾರ್ಥಿಗಳು ೭ನೇ ತರಗತಿಯವರೆಗೆ ಗುಣಾತ್ಮಕ, ನಿರ್ಣಯಾತ್ಮಕ ಮಾನದಂಡಗಳ ಪರೀಕ್ಷೆಗಳಿಲ್ಲದೆ ನೇರವಾಗಿ ೮ನೇ ತರಗತಿಗೆ ಪ್ರವೇಶಾತಿ ಪಡೆಯುವುದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಸಂಘಟನೆ ಖಜಾಂಚಿ ಅಬ್ದುಲ್‌ಖಾದರ ಕಾಲೆಕಾಝಿ, ಸದಸ್ಯ ಜುಬೇರ್ ದ್ರಾಕ್ಷಿ, ರಾವಸಾಹೇಬ ಜನವಾಡೆ, ಸತೀಶ ಅರಭಾವಿ, ತುಕಾರಾಮ ಬಡಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net