ಅತಿಥಿ ಶಿಕ್ಷಕರ ಬೇಡಿಕೆ ಈಡೇರದಿದ್ದರೇ ಹೋರಾಟ

Manjunath Prasad
Published on

ಚಾಮರಾಜನಗರ: ರಾಜ್ಯದ ವಸತಿ ಶಿಕ್ಷಣ ಸಂಸ್ಥೆಗಳ ಶಾಲೆ ಮತ್ತು ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸದಿದ್ದರೇ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ 484 ವಸತಿ ಶಾಲೆಗಳು ಹಾಗೂ 100 ಕ್ಕೂ ಅಧಿಕ ಕಾಲೇಜುಗಳಲ್ಲಿ 2000ಅತಿಥಿ ಶಿಕ್ಷಕರು ಹಾಗೂ 400 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅದರಂತೆ ಅತಿಥಿ ಶಿಕ್ಷಕರಿಗೆ 16,650 ರೂ, ಮತ್ತು ಉಪನ್ಯಾಸಕರಿಗೆ 18,150 ರೂ, ವೇತನವನ್ನು ನೀಡಲಾಗುತ್ತಿದ್ದು, ಗೌರವಧನವನ್ನು ಹೆಚ್ಚಳ ಮಾಡಬೇಕು ಹಾಗೂ ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದರೇ ಮುಂಬರುವ ಚಳಿಗಾಲದ ಅಧಿವೇಶನ ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಸತಿ ಶಾಲೆಗಳ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ದಸರಾ ರಜೆಯಲ್ಲಿ ಪೂರ್ಣ ಪ್ರಮಾಣದ ಗೌರವಧನ ನೀಡಬೇಕು. ತಿಂಗಳ ಮೊದಲ ವಾರದಲ್ಲಿ ಗೌರವಧನವನ್ನು ಬಿಡುಗಡೆ ಮಾಡಬೇಕು. ಏಪ್ರಿಲ್, ಮೇ ಮತ್ತು ಅಕ್ಟೋಬರ್ ತಿಂಗಳ ಪೂರ್ಣ ಗೌರವಧನವನ್ನು ನೀಡಬೇಕು. ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ನೇರ ಅವಕಾಶ ಕಲ್ಪಿಸಬೇಕು. ಅನುಭವಕ್ಕೆ ತಕ್ಕಂತೆ ವೇತನ ನೀಡಬೇಕು. ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ವಸತಿ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮಹದೇವಸ್ವಾಮಿ, ಅತಿಥಿ ಶಿಕ್ಷಕರಾದ ರವಿ, ಶಶಿಕುಮಾರ್, ವನಶ್ರೀ, ಕಾವ್ಯ, ಮಹದೇವಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net