ಅತಿಥಿ ಶಿಕ್ಷಕರ ಆಯ್ಕೆಯಲ್ಲಿ ಗೊಂದಲ

23rajesh1
Published on

ಚಾಮರಾಜನಗರ: ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ನೇಮಕ ಮಾಡಿಕೊಂಡಿರುವ ಅತಿಥಿ ಶಿಕ್ಷಕರ ಆಯ್ಕೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿದ್ದು, ಕಾಡಂಚಿನ ಗ್ರಾಮಗಳ ಶಾಲೆಗಳಿಗೆ ಶಿಕ್ಷಕರು ದೊರೆಯದೇ ಸಮಸ್ಯೆ ಉಂಟಾಗಿದೆ.

ಜಿಲ್ಲೆಯ ಪ್ರೌಢಶಾಲೆಗಳಲ್ಲಿ 178 ಮತ್ತು ಪ್ರಾಥಮಿಕ ಶಾಲೆಗಳಲ್ಲಿ 664 ಹುದ್ದೆಗಳು ಖಾಲಿ ಇದ್ದು, ಅದರಂತೆ ಚಾಮರಾಜನಗರದಲ್ಲಿ 250, ಗುಂಡ್ಲುಪೇಟೆ 242, ಹನೂರು 161, ಕೊಳ್ಳೇಗಾಲ 67 ಹಾಗೂ ಯಳಂದೂರು 41 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳು ಮುಂದಾಗಿತ್ತು. ಆದರೇ ಕೆಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕದಲ್ಲಿ ಗೊಂದಲ ಉಂಟಾಗಿದ್ದು, ಕೆಲವು ಶಾಲೆಗಳಲ್ಲಿ ಮೆರಿಟ್ ಆಧಾರದಲ್ಲಿ ಶಿಕ್ಷಕರನ್ನು ನೇಮಕ ಮಾಡಿದೆ. ಅರ್ಜಿಗಳು ಕಡಿಮೆ ಬಂದಿರುವ ಕಡೆ ಹಳೆಯ ಶಿಕ್ಷಕರಿಗೆ ಆದ್ಯತೆ ನೀಡಲಾಗಿದೆ. ಆದರೇ ಕೆಲವು ಶಾಲೆಗಳಲ್ಲಿ ಸೇವಾನುಭವ ಹೊಂದಿರುವ ಹಳೆಯ ಅತಿಥಿ ಶಿಕ್ಷಕರನ್ನು ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಾಡಂಚಿನ ಗ್ರಾಮಗಳ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕವಾಗದೇ ಮಕ್ಕಳ ಕಲಿಕೆಗೆ ತೊಡಕು ಉಂಟಾಗಿದೆ. ಒಟ್ಟಾರೆಯಾಗಿ ಅತಿಥಿ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಸೂಕ್ತ ರೀತಿಯಲ್ಲಿ ನಡೆದಿಲ್ಲ ಎಂದು ಕೆಲವು ಅತಿಥಿ ಶಿಕ್ಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಅತಿಥಿ ಶಿಕ್ಷಕರು ಹಾಗೂ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

*ಹಳೆಯ ಅತಿಥಿ ಶಿಕ್ಷಕರನ್ನು ಪರಿಗಣಿಸಿಲ್ಲ

ತಾಲೂಕಿನ ವ್ಯಾಪ್ತಿಯಲ್ಲಿ 187 ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳಬೇಕಿತ್ತು, ಆದರೇ ಸುಮಾರು 100 ಶಿಕ್ಷಕರನ್ನು ಮಾತ್ರ ತೆಗೆದುಕೊಂಡಿದ್ದಾರೆ. ಈ ಹಿಂದೆ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಕೆಲವರಿಗೆ ಈ ಸಾಲಿನಲ್ಲಿ ಆದ್ಯತೆ ನೀಡಿಲ್ಲ. ನಾನು ಕೂಡ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದು, 5 ವರ್ಷ ಅತಿಥಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಈ ಹಿಂದೆ ಕಡಿಮೆ ಸಂಬಳಕ್ಕೆ ನಾವು ಸೇವೆ ಸಲ್ಲಿಸಿದ್ದೇವೆ. ಆದರೇ ನನ್ನನ್ನು ಕೂಡ ಈ ಬಾರಿ ಪರಿಗಣಿಸಿಲ್ಲ. ಆಯ್ಕೆ ಪ್ರಕ್ರಿಯೆ ಸೂಕ್ತ ರೀತಿಯಲ್ಲಿ ನಡೆದಿಲ್ಲ.

ಮನೋಜ್ ಮಸು, ಅತಿಥಿ ಶಿಕ್ಷಕ, ಚಾಮರಾಜನಗರ

*ಕಾಡಂಚಿನ ಶಾಲೆಗಳಿಗೆ ಅತಿಥಿ ಶಿಕ್ಷಕರು ಸಿಗುತ್ತಿಲ್ಲ

ತಾಲೂಕಿನ ಕೆಲವು ಪ್ರೌಢಶಾಲೆಗಳಲ್ಲಿ ಭಾಷಾವಾರು ಶಿಕ್ಷಕರ ಕೊರತೆಯಿದ್ದು, ಸರ್ಕಾರದಿಂದ 39 ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ಸಿಕ್ಕಿದೆ. ಇದರಲ್ಲಿ 25 ಶಿಕ್ಷಕರು ನಿಯೋಜನೆಗೊಂಡಿದ್ದು, 14 ಅತಿಥಿ ಶಿಕ್ಷಕರ ಕೊರತೆ ಇದೆ. ಕಾಡಂಚಿನ ಶಾಲೆಗಳಿಗೆ ಅತಿಥಿ ಶಿಕ್ಷಕರು ಸಿಗುತ್ತಿಲ್ಲ. ಸಮೀಪದ ಶಾಲೆಯ ಶಿಕ್ಷಕರನ್ನು ನಿಯೋಜಿಸಲು ಈಗಾಗಲೇ ಕ್ರಮವಹಿಸಲಾಗಿದೆ.

ಗುರುಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಹನೂರು

*ಕೆಲವೆಡೆ ನೇಮಕವೇ ಆಗಿಲ್ಲ

ಕೂಡ್ಲೂರು ಶಾಲೆಯಲ್ಲಿ ಕನ್ನಡ ಮತ್ತು ವಿಜ್ಞಾನ ಶಿಕ್ಷಕರ ಕೊರತೆ ಇರುವುದು ತಿಳಿದಿದೆ. ಶೈಕ್ಷಣಿಕ ವರ್ಷ ಆರಂಭವಾಗಿದ್ದು, ತರಗತಿಗಳು ಶುರುವಾಗಿದೆ. ಆದರೂ ಅತಿಥಿ ಶಿಕ್ಷಕರ ನೇಮಕವಾಗಿಲ್ಲ. ಇದರಿಂದ ಮಕ್ಕಳ ಪಾಠ, ಪ್ರವಚನಕ್ಕೆ ತೊಂದರೆಯಾಗಲಿದೆ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಮುತುರ್ವರ್ಜಿ ವಹಿಸಿ, ಶೀಘ್ರ ಅತಿಥಿ ಶಿಕ್ಷಕರನ್ನು ನಿಯೋಜಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು.

ವೆಂಕಟಾಚಲ, ಕೂಡ್ಲೂರು, ಹನೂರು

*ಮೆರಿಟ್ ಆಧಾರದಲ್ಲಿ ನೇಮಕ

ಯಳಂದೂರು ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಗೆ 26 ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಶಿಕ್ಷಕರ ಕೊರತೆ ಯಾಗದ ರೀತಿ ಮಕ್ಕಳಿಗೆ ಪಾಠ-ಪ್ರವಚನ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಅತಿಥಿ ಶಿಕ್ಷಕರನ್ನು ಮೆರಿಟ್ ಆಧಾರದ ಮೇಲೆ ಹಾಗೂ ಸಂಬಂಧಪಟ್ಟ ವಿಷಯದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

ಮಾರಯ್ಯ, ಕ್ಷೇತ್ರಶಿಕ್ಷಣಾಧಿಕಾರಿ, ಯಳಂದೂರು

*ಖಾಯಂ ಶಿಕ್ಷಕರಿದ್ದರೇ ಅನುಕೂಲ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು, ಹುದ್ದೆ ಖಾಲಿ ಇರುವ ಕಡೆ ಶಿಕ್ಷಕರ ಕೊರತೆ ಉಂಟಾಗದಂತೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಆದೇಶ ನೀಡಿದೆ. ಅತಿಥಿ ಶಿಕ್ಷಕರ ನೇಮಕಾತಿ ಮೆರಿಟ್ ಆಧಾರ ಮೇಲೆ ಪರಿಗಣಿಸಲಾಗಿದೆ. ಖಾಯಂ ಶಿಕ್ಷಕರ ನೇಮಕಾತಿಯಾಗಬೇಕಿದೆ. ಇದರಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅನುಕೂಲವಾಗಲಿದೆ. ಎಂ.ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ, ಕೊಳ್ಳೇಗಾಲ

*ಮಕ್ಕಳ ಕಲಿಕೆಗೆ ತೊಂದರೆ

ಗ್ರಾಮದ ಶಾಲೆಯಲ್ಲಿ 1-7 ನೇ ತರಗತಿವರೆಗೆ 93 ವಿದ್ಯಾರ್ಥಿಗಳಿದ್ದು, ಖಾಲಿ ಸ್ಥಳಕ್ಕೆ 3 ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದ್ದರೂ ಮುಖ್ಯ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ಮಕ್ಕಳಿಗೆ ದೈಹಿಕ ಚಟುವಟಿಕೆಗಳು ಇಲ್ಲದಂತಾಗಿದೆ. ಶಾಲೆಗೆ ದಾನಿಗಳು ಕಂಪ್ಯೂಟರ್ ಹಾಗೂ ಪ್ರಿಂಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದರೂ, ಕಂಪ್ಯೂಟರ್ ಶಿಕ್ಷಕರಿಲ್ಲದೇ ಕಲಿಕೆಗೆ ತೊಂದರೆಯಾಗಿದೆ.

ಮಹೇಶ್, ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯಿತಿ, ಬಾಚಹಳ್ಳಿ, ಗುಂಡ್ಲುಪೇಟೆ

*ಹೋರಾಟದ ಎಚ್ಚರಿಕೆ

ಶಿಕ್ಷಣ ಇಲಾಖೆ ಹೊರಡಿಸಿರುವ ನಿಯಮದ ಆಧಾರದಲ್ಲಿ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು. ಯಾರೋ ರಾಜಕಾರಣಿ, ಅಧಿಕಾರಿಗಳು ಹಾಗೂ ಶಿಕ್ಷಕರ ಶಿಾರಸ್ಸಿನ ಮೇರೆಗೆ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡುವುದು ಸರಿಯಲ್ಲ. ಸೇವಾನುಭವ ಮತ್ತು ಮೆರಿಟ್ ಆಧಾರದಲ್ಲಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಇಲ್ಲವಾದರೇ ಈ ಸಂಬಂಧ ಹೋರಾಟ ರೂಪಿಸಲಾಗುವುದು.

ಹಳ್ಳಿಕೆರೆಹುಂಡಿ ಭಾಗ್ಯರಾಜ್, ಹೋರಾಟಗಾರ, ಚಾಮರಾಜನಗರ

*ಹಳೆಯ ಶಿಕ್ಷಕರ ಪರಿಗಣನೆ

ತಾಲೂಕಿನ ಶಾಲೆಗಳಲ್ಲಿ 260 ಶಿಕ್ಷಕ ಹುದ್ದೆಗಳು ಖಾಲಿಯಾಗಿವೆ. 200 ಹುದ್ದೆಗಳ ನೇಮಕಾತಿಗೆ ಅನುಮತಿ ದೊರಕಿದ್ದರಿಂದ ಹೆಚ್ಚು ಅರ್ಜಿ ಬಂದಿರುವ ಕಡೆಗಳಲ್ಲಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿದ ಶಿಕ್ಷಕರನ್ನು, ಮುಖ್ಯ ಶಿಕ್ಷಕರ ಹುದ್ದೆ ಹೊರತುಪಡಿಸಿ ನಿಯೋಜಿಸಲಾಗಿದೆ. ಒಂದು ಎರಡು ಅರ್ಜಿ ಬಂದಿರುವ ಕಡೆಗಳಲ್ಲಿ ಹಿಂದೆ ಸೇವೆಸಲ್ಲಿಸುತ್ತಿದ್ದ ಹಳೆಯ ಶಿಕ್ಷಕರನ್ನು ನಿಯೋಜಿಸಲಾಗಿದೆ.

ಟಿ.ಆರ್.ಸ್ವಾಮಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಗುಂಡ್ಲುಪೇಟೆ

*ಲಿತಾಂಶದ ಮೇಲೆ ಪ್ರಭಾವ

ಸರ್ಕಾರ ಆರ್ಥಿಕ ಪರಿಸ್ಥಿತಿ ನಿಭಾಯಿಸುವ ಉದ್ದೇಶಕ್ಕೆ ಕಡಿಮೆ ಸಂಬಳ ನೀಡಿ ಅತಿಥಿ ಶಿಕ್ಷಕರ ನೇಮಕ ಮಾಡುತ್ತಿದೆ. ಲಕ್ಷಾಂತರ ಜನರು ಬಿ.ಎಡ್, ಡಿ.ಎಡ್ ಓದಿಕೊಂಡಿದ್ದು, ಖಾಯಂ ಶಿಕ್ಷಕರನ್ನು ನೇಮಕ ಮಾಡಿದರೆ ಉದ್ಯೋಗ ಜತೆಗೆ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸ ಬಹುದು. ಕಾಡಂಚಿನ ಹಾಗೂ ಗ್ರಾಮಾಂತರ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಸಿಗುತ್ತಿಲ್ಲ. ಪರಿಣಾಮ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಕುಸಿದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಎಸ್. ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ, ಮುಡಿಗುಂಡ ಆದರ್ಶ ವಿದ್ಯಾಲಯ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net