ಅತಿಥಿ ಉಪನ್ಯಾಸಕರಿಂದ ರಾಜ್ಯ ಮಟ್ಟದ ರ್ಯಾಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರು ಚಲೋ

mysore
Published on

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ರಾಜ್ಯ ಮಟ್ಟದ ಮೈಸೂರು ಚಲೋ ರ‌್ಯಾಲಿಯನ್ನು ನಗರದಲ್ಲಿ   ನಡೆಸಿದರು.

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕ ರಾಜ್ಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಜಮಾವಣೆಗೊಂಡ ವಿವಿಧ ಜಿಲ್ಲೆಗಳ ಅತಿಥಿ ಉಪನ್ಯಾಸಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟ ರ‌್ಯಾಲಿಯು ನಗರ ಪೊಲೀಸ್ ಆಯುಕ್ತರ ಕಚೇರಿ, ಡಯಟ್, ಗೋಪಾಲಗೌಡ ಆಸ್ಪತ್ರೆ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಪದವಿ ಕಾಲೇಜುಗಳಲ್ಲಿ ಸುವಾರು 10 ಸಾವಿರ ಅತಿಥಿ ಉಪಸನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ಗೊಂದಲದಿಂದಾಗಿ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಿನ್ನಡೆಯಾಗಿದೆ. ಜತೆಗೆ, ತಾತ್ಕಾಲಿಕ ಉಪನ್ಯಾಸಕರ ಬದುಕು ಸಹ ಅತಂತ್ರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿನ ತಾರತಮ್ಯ ನಿವಾರಿಸಿ, ಸೇವಾ ಹಿರಿತನದ ಆಧಾರದ ಮೇಲೆ ನೇಮಕ ವಾಡಬೇಕು. ಉಪನ್ಯಾಸಕರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಆಯೋಗ ರಚಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಅಧ್ಯಕ್ಷ ಡಾ.ಸೋಮಶೇಖರ್ ಎಚ್.ಶಿಮೊಗ್ಗಿ ಮಾತನಾಡಿ, ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಂದಾಜು 10,976 ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಈವರೆಗೂ ಯಾವುದೇ ಸೇವಾ ವಿನಾಯಿತಿ, ಭದ್ರತೆ ಗೌರವಧನ ಹಾಗೂ ಸವಲತ್ತುಗಳನ್ನು ನೀಡುತ್ತಿಲ್ಲ. ಈಗ ಅತಿಥಿ ಉಪನ್ಯಾಸಕ ನೇಮಕದಲ್ಲಿ ಯುಜಿಸಿ ಹಾಗೂ ನಾನ್ ಯುಜಿಸಿ ಎಂಬ ಸಮಸ್ಯೆ ಸೃಷ್ಟಿಸಿ ಹಿರಿಯ ಅತಿಥಿ ಉಪನ್ಯಾಸಕರ ಆಯ್ಕೆಯನ್ನು ಕೈಬಿಡಲಾಗುತ್ತಿದೆ ಎಂದು ಕಿಡಿಕಾರಿದರು.

ಅತಿಥಿ ಉಪನ್ಯಾಸಕರ ಸೇವೆಯ ಅವಧಿಯನ್ನು ಆಧರಿಸಿ, ಹಿರಿಯರಿಗೆ ಅವಕಾಶ ಕಲ್ಪಿಸಿಕೊಡಬೇಕು. ಇದೀಗ ವಿದ್ಯಾರ್ಥಿಗಳಿಗೆ ಪಾಠ ಆರಂಭವಾಗಿದ್ದು, ಅವರ ಹಿತದೃಷ್ಟಿಯಿಂದ ಅತಿಥಿ ಉಪನ್ಯಾಸಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಸಮಸ್ಯೆ ಬಗೆಹರಿಸಬೇಕು.

ಸೇವಾ ವಿನಾಯಿತಿಗೆ ಸಂಬಂಧಿಸಿದಂತೆ ಹಿಂದಿನ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯನ್ನು ಜಾರಿಗೊಳಿಸಿ ಶೀಘ್ರದಲ್ಲೇ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರಿಗೆ ಸರ್ಕಾರದಿಂದ ಯಾವುದೇ ಭದ್ರತೆಯಿಲ್ಲದ ಕಾರಣ ಸೇವಾನುಭವದ ಆಧಾರದ ಮೇಲೆ ಗೌರವಧನ ಹೆಚ್ಚಳ, ವಾರ್ಷಿಕ ಆರೋಗ್ಯ ವಿಮೆ, ನಿವೃತ್ತಿ ಭತ್ಯೆಯನ್ನು 5 ಲಕ್ಷದಿಂದ 25 ಲಕ್ಷ ರೂ.ಗೆ ಹೆಚ್ಚಿಸಬೇಕು. ಮಾಸಿಕ ವೇತನ ಸಹಿತ ಒಂದು ದಿನದ ರಜೆ, ಮಹಿಳೆಯರಿಗೆ ವೇತನ ಸಹಿತ 6 ತಿಂಗಳ ಹೆರಿಗೆ ರಜೆ, ನಿವೃತ್ತಿಯ ನಂತರ ವೇತನ ಇಲ್ಲದಿರುವುದರಿಂದ ಸೇವೆಯನ್ನು ಯುಜಿಸಿ ನಿಯಮಾವಳಿಯಲ್ಲಿ 70 ವರ್ಷಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಸಂಘದ ಮುಖಂಡರಾದ ಕೆ.ಆರ್‌ನಗರ ದಿವಾಕರ, ಕೆ.ರಾಜೇಶ್ ಕುಮಾರ್, ಬಿ.ಎಸ್ ನಾಗರಾಜು ಮದ್ದೂರು, ಡಾ.ಜೆ.ಸಿ ರವೀಂದ್ರ, ಸುರೇಶ್ ಡಬ್ಬಿ ಬಿಜಾಪುರ, ಎನ್.ಕೆ ದೀಪಾ, ಎಂ.ಆರ್ ರೂಪಾ, ಡಾ.ಬಿ ಶಾಮಲಾ, ಹರ್ಷಿತ ಮೈಸೂರು, ವಿ.ಧನಂಜಯಪ್ಪ ಮೈಸೂರು, ಮಹೇಶ್ ಮೈಸೂರು, ವಿನಯ್ ಮದ್ದೂರು, ಯತೀಶ್ ಕಬ್ಬಾಳ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net