ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆಯಲ್ಲಿ ಹಸ್ತಕ್ಷೇಪ ಸಲ್ಲದು

4378a4e6-e2ba-442c-b87e-1a636d3ed520
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದು ಏಕೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನಿಸಿದರು.

ರಾಜ್ಯದ ಇತರ ವಿಶ್ವವಿದ್ಯಾಲಯಗಳು ವೇತನ ಪರಿಷ್ಕರಣೆಯ ಅಧಿಕಾರ ಹೊಂದಿವೆ. ಆದರೆ, ಮೈಸೂರು ವಿವಿ ವಿಷಯದಲ್ಲಿ ಮಾತ್ರ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಇದು ಖಂಡನೀಯ. ತಕ್ಷಣ ಉನ್ನತ ಶಿಕ್ಷಣ ಸಚಿವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿ ಅತಿಥಿ ಉಪನ್ಯಾಸಕರ ಪರಿಷ್ಕೃತ ವೇತನ ಜಾರಿ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ವಿವಿ ರಚಿಸಿದ ಸಮಿತಿ 6 ತಿಂಗಳ ಅಧ್ಯಯನ ಮಾಡಿ ತಿಂಗಳಿಗೆ 28 ಸಾವಿರದಿಂದ 37 ಸಾವಿರ ರೂ.ಗಳಿಗೆ ವೇತನ ಪರಿಷ್ಕರಿಸಿದೆ. ಇದಕ್ಕೆ ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ. ಅಂತೆಯೆ, ಒಂದು ತಿಂಗಳು ಪರಿಷ್ಕೃತ ವೇತನವನ್ನೂ ನೀಡಲಾಗಿದೆ. ಬಳಿಕ ಏಕಪಕ್ಷೀಯ ಮತ್ತು ಅನಧಿಕೃತವಾಗಿ ಹಿಂಪಡೆದುಕೊಳ್ಳಲಾಗಿದೆ. ಇದು ವಿವಿ ನಿಯಮಕ್ಕೆ ವಿರುದ್ಧ ಎಂದು ಕಿಡಿಕಾರಿದರು.

ಆಕ್ಷೇಪ ಏಕೆ?:
ಬೆಂಗಳೂರು ವಿವಿಯಲ್ಲಿ 49,920 ರೂ., ಮಂಗಳೂರು ವಿವಿಯಲ್ಲಿ 40 ಸಾವಿರ ರೂ., ಕುವೆಂಪು ವಿವಿಯಲ್ಲಿ 45 ಸಾವಿರ ರೂ., ಬೆಂಗಳೂರು ಕೇಂದ್ರ ವಿವಿಯಲ್ಲಿ 50 ಸಾವಿರ ರೂ., ಧಾರವಾಡದ ಕೃಷಿ ವಿವಿಯಲ್ಲಿ 45 ಸಾವಿರ ರೂ., ಗುಲ್ಬರ್ಗಾ ವಿವಿಯಲ್ಲಿ 45 ಸಾವಿರ ರೂ. ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿದೆ. ಆದರೆ, ಮೈಸೂರು ವಿವಿ ಮಾಡಿರುವ ಪರಿಷ್ಕೃತ ವೇತನಕ್ಕೆ ಮಾತ್ರ ಆರ್ಥಿಕ ಇಲಾಖೆ ಆಕ್ಷೇಪಿಸಿದೆ ಎಂದು ಮರಿತಿಬ್ಬೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ತಪ್ಪು ಮಾಹಿತಿ:
ಪರಿಷ್ಕೃತ ವೇತನದಿಂದ 2.80 ಕೋಟಿ ರೂ. ಮಾತ್ರ ಹೆಚ್ಚಾಗಲಿದೆ. ಈ ಹಿಂದಿನ ಕುಲಪತಿ ತಮ್ಮ ಅಧಿಕಾರ ಅವಧಿಯ ಕೊನೆಯಲ್ಲಿ ಗುತ್ತಿಗೆ ಆಧಾರಿತ ಬೋಧಕೇತರ ಸಿಬ್ಬಂದಿ ವೇತನವನ್ನು ಯಾವುದೇ ಅನುಮತಿ ಪಡೆಯದೆ 50ರಿಂದ 60 ಸಾವಿರ ರೂ.ಗೆ ಏರಿಕೆ ಮಾಡಿದರು. ಇದರಿಂದ 4.20 ಕೋಟಿ ರೂ. ಹೊರೆಯಾಗಲಿದೆ. ಈ ವಿಷಯವನ್ನೂ ಸೇರಿಸಿ ಮೈಸೂರು ವಿವಿ ಹಣಕಾಸು ಇಲಾಖೆಗೆ ತಪ್ಪು ಮಾಹಿತಿ ನೀಡಿದೆ ಎಂದು ಮರಿತಿಬ್ಬೇಗೌಡ ಆರೋಪಿಸಿದರು.


ಅತಿಥಿ ಉಪನ್ಯಾಸಕರಿಗೆ ಮೈಸೂರು ವಿವಿ ಆಂತರಿಕ ಸಂಪನ್ಮೂಲದಿಂದ ವೇತನ ನೀಡಲಾಗುತ್ತಿದೆ. ಇದಕ್ಕೆ ಸರ್ಕಾರ ಯಾವ ಅನುದಾನವನ್ನೂ ನೀಡುತ್ತಿಲ್ಲ. ಹಾಗಿದ್ದೂ ಏಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.


ಮೈಸೂರು ವಿವಿಯ 666 ಬೋಧಕ ಹುದ್ದೆಗಳ ಪೈಕಿ 406 ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ತಿಂಗಳಿಗೆ 8ರಿಂದ 10 ಕೋಟಿ ರೂ., ವರ್ಷಕ್ಕೆ ಅಂದಾಜು 100 ಕೋಟಿ ರೂ. ಸರ್ಕಾರಕ್ಕೆ ಉಳಿತಾಯವಾಗುತ್ತಿದೆ. ಹೀಗಾದರೆ ವಿವಿಯಲ್ಲಿ ಯಾವ ರೀತಿ ಶಿಕ್ಷಣ ನೀಡಲಾಗುತ್ತಿದೆ? ಗುಣಮಟ್ಟದ ಕಥೆ ಏನು? ಅತಿಥಿ ಉಪನ್ಯಾಸಕರಿಂದ ವಿವಿ ನಡೆಯುತ್ತಿದೆ. ಇದೀಗ ಈ ಸಮಸ್ಯೆಯಿಂದ ಪಾಠ ಪ್ರವಚನಕ್ಕೂ ಅಡ್ಡಿಯಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಮಹಾರಾಣಿ ಕಾಲೇಜಿನ ಸಮಸ್ಯೆ ಪರಿಹರಿಸಿಲ್ಲ
ಮೈಸೂರಿನ ಮಹಾರಾಣಿ ಕಲಾ ಕಾಲೇಜಿನ ಕಟ್ಟಡದ ಒಂದು ಭಾಗ ಕುಸಿದು ಒಂದೂವರೆ ತಿಂಗಳು ಆಗಿದೆ. ಆದರೂ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಮುಂದಾಗಿಲ್ಲ ಎಂದು ಮರಿತಿಬ್ಬೇಗೌಡ ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಉನ್ನತ ಶಿಕ್ಷಣ ಸಚಿವರು, ಸಿಎಂ ಸಹ ಮೈಸೂರಿಗೆ ಭೇಟಿ ನೀಡಿದರೂ ಈ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ. ಇವರಿಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net