ಅತಿಥಿ ಉಪನ್ಯಾಸಕರ ವಿವಿ ಆಗುತ್ತಿದೆ ಮೈಸೂರು ವಿಶ್ವವಿದ್ಯಾಲಯ

15
Published on

ಮೈಸೂರು : ಮೈಸೂರು ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ವಿವಿ ಆಗಿ ರೂಪಾಂತರಗೊಂಡಿದೆ ಎಂದು ಮೈವಿವಿ ವಿಶ್ರಾಂತ ಕುಲಪತಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ.ಎಸ್.ಎನ್.ಹೆಗ್ಡೆ ಕಳವಳ ವ್ಯಕ್ತಪಡಿಸಿದರು.


ಮೈವಿವಿ ಪರಿಸರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾದ ಪ್ರೊ.ಎಸ್.ಶ್ರೀಕಂಠಸ್ವಾಮಿ ಅವರಿಗೆ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮೈವಿವಿಯಲ್ಲಿ ಈಗ ಕಾಯಂ ಬೋಧಕರ ಸಂಖ್ಯೆ ಕಡಿಮೆಯಾಗಿದೆ. ಈಗಿರುವ ಪ್ರಾಧ್ಯಾಪಕರು ಒಬ್ಬೊಬ್ಬರಾಗಿ ನಿವೃತ್ತರಾಗುತ್ತಿದ್ದಾರೆ. ಇದರಿಂದಾಗಿ ಅತಿಥಿ ಉಪನ್ಯಾಸಕರಿಂದಲೇ ವಿವಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ನಿವೃತ್ತರಾಗಲಿರುವ ಪ್ರಾಧ್ಯಾಪಕರ ಪರಿಣತಿ, ಅನುಭವ, ವಿಷಯ ಜ್ಞಾನವನ್ನು ವಿಶ್ವವಿದ್ಯಾಲಯಗಳು, ಸಮಾಜ ಮತ್ತು ಸರ್ಕಾರಿ ಸಂಸ್ಥೆಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ರಂಗದಲ್ಲಿ ನಿತ್ಯ ಒಂದಿಲ್ಲೊಂದು ಕೆಲಸಗಳು ನಡೆಯುತ್ತಿವೆ. ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಇಂಥ ಅನೇಕ ಕಾಮಗಾರಿಗಳಿಗೆ ವಿಷಯ ತಜ್ಞರಾದ ನಿವೃತ್ತ ಪ್ರಾಧ್ಯಾಪಕರ ಸಲಹೆ ಪಡೆದುಕೊಳ್ಳಬೇಕು. ಇದರಿಂದ ಕೆಲಸದಲ್ಲಿ ಗುಣಮಟ್ಟ ಮತ್ತು ಹೊಸತನ ತಂದುಕೊಡಲು ಸಾಧ್ಯವಾಗಲಿದೆ. ಆದರೆ, ಇದು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ನಿವೃತ್ತ ಪ್ರಾಧ್ಯಾಪಕರನ್ನು ಸಮಾಜವೇ ಪರಿಗಣನೆಗೆ ತೆಗೆದುಕೊಳ್ಳಲ್ಲ. ವಿಶ್ವವಿದ್ಯಾಲಯಗಳು ಅವರ ಸೇವೆಯನ್ನು ಉಪಯೋಗಕ್ಕೆ ತೆಗೆದುಕೊಳ್ಳಲ್ಲ. ಅವರು ಮಾಡಿರುವ ಸೇವೆ ಮತ್ತು ಕೆಲಸವನ್ನೂ ಗುರುತಿಸಲ್ಲ. ಆದರೆ, ಈ ಕುರಿತು ನಿವೃತ್ತ ಪ್ರಾಧ್ಯಾಪಕರು ತಲೆ ಕೆಡಿಸಿಕೊಳ್ಳಬಾರದು. ವಿವಿಧ ಚಟುವಟಿಕೆಗಳು ಮತ್ತು ಕೆಲಸದಲ್ಲಿ ಸಕ್ರಿಯವಾಗಬೇಕು. ತಮ್ಮ ಅನುಭವಕ್ಕೆ ಅಕ್ಷರರೂಪ ನೀಡಬೇಕು. ಸಂಶೋಧನೆಯಲ್ಲಿ ಮುಂದುವರಿಯಬೇಕು ಎಂದು ಸಲಹೆ ನೀಡಿದರು.
ಮತ್ತೊಬ್ಬ ವಿಶ್ರಾಂತ ಕುಲಪತಿ ಪ್ರೊ.ಎನ್.ಎಸ್.ರಾಮೇಗೌಡ ಮಾತನಾಡಿ, ಉನ್ನತ ಮತ್ತು ಮಧ್ಯಮ ಮಟ್ಟದಲ್ಲಿ ಸಂಶೋಧನಾ ಕೆಲಸಗಳು ನಡೆಯುತ್ತಿವೆ. ಆದರೆ, ಕಳಹಂತವಾದ ಶಾಲಾ-ಕಾಲೇಜುಗಳಲ್ಲಿ ಆಗುತ್ತಿಲ್ಲ, ಇದು ಸರಿಯಲ್ಲ. ಈ ನಿಟ್ಟಿನಲ್ಲಿ ಬೋಧಕರು ಪ್ರಯತ್ನಿಸಬೇಕು. ಆಗ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದರು.


ನಿವೃತ್ತಿ ವಿಶ್ರಾಂತಿ ಸಮಯವಲ್ಲ, ಅದು ಮತ್ತೊಂದು ಅವಕಾಶ. ಬೇರೆ ಕೆಲಸದಲ್ಲಿ ಸಕ್ರಿಯವಾಗಲು ದೊರೆತ ಸಮಯಾವಕಾಶ. ಆದರೆ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಶೋಧನೆ ಕೈಗೊಳ್ಳಬೇಕು. ಸಂಘ-ಸಂಸ್ಥೆಗಳ ಕೆಲಸ ಕಾರ್ಯಗಳೊಂದಿಗೆ ಕೈಜೋಡಿಸಬೇಕು. ಈ ರೀತಿಯ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಿಸಿಕೊಳ್ಳಬೇಕು ಎಂದರು.


ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಸ್.ಆರ್.ನಿರಂಜನ, ಅಭಿನಂದನಾ ಸಮಿತಿ ಅಧ್ಯಕ್ಷ ಪ್ರೊ.ಜಿ.ವಿ.ವೆಂಕಟರಮಣ, ಪ್ರೊ.ಎನ್.ಎಸ್.ರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net