ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಿ

Dharani
ಬೀದರ್‌ನಲ್ಲಿ ಅತಿಥಿ ಉಪನ್ಯಾಸಕರು ಧರಣಿ ನಡೆಸಿದರು. ಚಂದ್ರಕಾಂತ ನಾರಾಯಣಪುರೆ, ಬಂಡೆಪ್ಪ ಬಾಲಕುಂದೆ, ಈಶ್ವರಸಿಂಗ್ ಠಾಕೂರ್, ಸ್ವಾಮಿದಾಸ ಮಲ್ಲಿಕಾರ್ಜುನ ತಿರಲಾಪುರೆ, ಪ್ರಾಣೇಶ್ ಇತರರಿದ್ದರು.
Published on

ಬೀದರ್: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಶೀಘ್ರದಲ್ಲಿ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರುಗಡೆ ಹೋರಾಟ ನಡೆಸಿ, ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಯುಜಿಸಿ, ನಾನ್ ಯುಜಿಸಿ ಎಂಬ ತಾರತಮ್ಮ ಇಲ್ಲದೆ ಸೇವಾ ಜೇಷ್ಠತೆ ಅನುಸರಿಸಿ ಸೇವೆಯಲ್ಲಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ೪೩೨ ಪದವಿ ಕಾಲೇಜುಗಳಲ್ಲಿ ೧೧ ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕನಿಷ್ಠ ಗೌರವಧನ ಪಡೆದು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅತಿಥಿ ಉಪನ್ಯಾಸಕರ ಪ್ರಸ್ತುತ ಸಮಸ್ಯೆಯನ್ನು ಸರ್ಕಾರದ ಹಂತದಲ್ಲಿ ಅಥವಾ ಸಚಿವ ಸಂಪುಟ ಸಮಿತಿ ಮುಂದೆ ತಂದು ಇತ್ಯರ್ಥಪಡಿಸಬೇಕು ಹಾಗೂ ಸೇವಾ ಜೇಷ್ಠತೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೋರ್ಟ್ ಆದೇಶದನ್ವಯ ಕಾಲೇಜು ಶಿಕ್ಷಣ ಇಲಾಖೆ ಯುಜಿಸಿ ಅರ್ಹತೆ ಪಡೆದವರನ್ನು ಮಾತ್ರ ನೇಮಕಾತಿ ಮಾಡಲು ಮುಂದಾದರೆ ಹಲವು ವರ್ಷದಿಂದ ಕಡಿಮೆ ಸಂಭಾವನೆಯಲ್ಲಿ ಕರ್ತವ್ಯ ಮಾಡುತ್ತಿದ್ದ ಐದು ಸಾವಿರಕ್ಕೂ ಅಧಿಕ ಉಪನ್ಯಾಸಕರು ಬೀದಿಗೆ ಬೀಳಲಿದ್ದಾರೆ ಎಂದು ತಿಳಿಸಿದ್ದಾರೆ.

ಯುಜಿಸಿ, ನಾನ್ ಯುಜಿಸಿ ಗೊಂದಲದಿಂದ ಪದವಿ ಕಾಲೇಜುಗಳು ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ೪೩೨ ಸರ್ಕಾರಿ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಿಲ್ಲ. ಶೇ.೭೦ರಷ್ಟು ಕಾಲೇಜುಗಳು ಅತಿಥಿ ಉಪನ್ಯಾಸಕ ಮೇಲೆ ಅವಲಂಬಿತವಾಗಿವೆ. ಕೂಡಲೇ ಎಲ್ಲ ಗೊಂದಲಗಳನ್ನು ನಿವಾರಣೆ ಮಾಡಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಬೇಡಿಕೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಬರೆದ ಮನವಿಪತ್ರವನ್ನು ಅವರ ಕಚೇರಿಗೆ ಸಲ್ಲಿಸಲಾಯಿತು.

ಜಿಲ್ಲಾ ಅತಿಥಿ ಉಪನ್ಯಾಸಕ ರ ಸಂಘದ ಅಧ್ಯಕ್ಷ ಚಂದ್ರಕಾಂತ ನಾರಾಯಣಪುರೆ, ಬಂಡೆಪ್ಪ ಬಾಲಕುಂದೆ, ಏಕನಾಥ, ಮಲ್ಲಿಕಾರ್ಜುನ ತಿರಲಾಪುರೆ, ಜಾವೀದ್, ಶಾಮಸುಂದರ, ಬಾಬು ಅರುಣ್ ಗಂಗಾಧರ .ಪ್ರಾಣೇಶ್, ಲಕ್ಷ್ಮಣ ಸಾವಳೆ, ದೇವರಾಜ, ಲಕ್ಷ್ಮಣ ಟೋಕರೆ, ಮಲ್ಲಿಕಾರ್ಜುನ ಬಿರಾದಾರ್, ಡಾ.ವಿಶ್ವನಾಥ, ಡಾ.ಮಿಲೀಂದ ಕೀರ್ತಿ, ಅಂಬಿಕಾ, ಪ್ರಮೀಳಾ, ಈಶ್ವರಿಮ ಅಶ್ವಿನಿ, ವಾಣಿ ಇತರರಿದ್ದರು. ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಹಾಗೂ ಕಲ್ಯಾಣ ಕರ್ನಾಟಕ ನಿರ್ಮಾಣ ಸಂಘಟನೆ ಅಧ್ಯಕ್ಷ ಸ್ವಾಮಿದಾಸ ಹೋರಾಟಕ್ಕೆ ಬೆಂಬಲಿಸಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net