

ಕಲಬುರಗಿ: ರಾಜ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಆರಂಭವಾಗಿ ಎರಡು ತಿಂಗಳಾದರೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡದೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಜತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ.ಚಂದ್ರಕಾಂತ ಶಿರೋಳೆ ಆರೋಪಿಸಿದರು.
ರಾಜ್ಯದಲ್ಲಿ ೪೩೦ ಕಾಲೇಜುಗಳಲ್ಲಿ ಸುಮಾರು ೧೫ ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರ ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ಆಯ್ಕೆಗೆ ಸೆ.೬ರಂದು ಅಧಿಸೂಚನೆ ಹೊರಡಿಸಿಸುತ್ತಿ. ಸೆ.೨೩ರಂದು ಕೌನ್ಸೆಲಿಂಗ್ ಆರಂಭಿಸಬೇಕಿತ್ತು. ಆದರೆ ಇದುವರೆಗೆ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ಉಪನ್ಯಾಸಕರು ಇಲ್ಲದೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವವರಿಲ್ಲ. ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ. ಆ.೬ರಂದು ಅತಿಥಿ ಉಪನ್ಯಾಸಕರ ಸೇವೆ ಕೊನೆ ಮಾಡಲಾಗಿದೆ. ಇದುವರೆಗೆ ಕೆಲಸ, ಸಂಬಳ ಇಲ್ಲ. ಜೀವನ ಕಷ್ಟಕ್ಕೆ ಸಿಲುಕಿದೆ. ಖಾಸಗಿ ಕಾಲೇಜಲ್ಲಿ ಕೆಲಸ ಮಾಡುವಂತಿಲ್ಲ ಎಂದು ಷರತ್ತು ಹಾಕಲಾಗಿದೆ. ಕೆಲಸ ನೀಡದಿದ್ದರೆ ಹೇಗೆ ಜೀವನ ಸಾಗಿಸಬೇಕು ಎಂದು ಪ್ರಶ್ನಿಸಿದರು.
ಅಲ್ಲಿಂದ ಇಲ್ಲಿವರೆಗೆ ಕೆಲಸವು, ಇಲ್ಲ ಸಂಬಳವೂ ಇಲ್ಲದಂತಾಗಿದೆ. ಇದರಿಂದ ನಮ್ಮ ಕುಟುಂಬ ಕೂಡ ಪರದಾಡುವಂತಾಗಿದೆ ಎಂದು ದುಖಃ ತೋಡಿಕೊಂಡ ಅವರು, ಸರಕಾರ ಬೇರೆ ಕಡೆ ಕೆಲಸ ಮಾಡಬಾರದು ಎಂದು ಷರತ್ತು ಹಾಕುತ್ತದೆ. ಇದೀಗ ಕೆಲಸ ನೀಡದಿದ್ದರೆ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಸತತ ಹೋರಾಟದ ನಂತರ ವೇತನ ಮಾತ್ರ ಹೆಚ್ಚಿಸಿದ್ದು, ಇತರ ಬೇಡಿಕೆಗಳಾದ ಹೆರಿಗೆ ರಜೆ, ಆರೋಗ್ಯ ವಿಮೆ, ನಿವೃತ್ತರಿಗೆ ಇಡುಗಂಟು ಸೇರಿ ಇತರ ಬೇಡಿಕೆ ಈಡೇರಿಲ್ಲ. ಪ್ರಸ್ತುತ ಕೂಡಲೇ ಅತಿಥಿ ಶಿಕ್ಷಕರನ್ನು ನೇಮಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು.
ಪ್ರಮುಖರಾದ ನಾಗವೇಣಿ ಹಿರೇಮಠ, ಡಾ. ಅವಮ್ಮ, ವೈಜನಾಥ ಬಾವಿ, ರಮೇಶ ಕವಡೆ ಇತರರಿದ್ದರು.