

ಮಾಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ತಾಲೂಕು ಅತಿಥಿ ಉಪನ್ಯಾಸಕರು ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಡಿ.ಎಸ್. ರಾಜಣ್ಣ ಮಾತನಾಡಿ, ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಸೇವಾ ಭದ್ರತೆಗಾಗಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಜ.14ರಂದು ಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಿಸಿ ಆದೇಶ ಹೊರಡಿಸಿದೆ. ಆದರೆ ಈ ಆದೇಶ ಕಹಿಯಾಗಿದ್ದು, ಉಳಿದ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿಲ್ಲ. ಇಬ್ಬರು ಮಾಡುವ ಕೆಲಸವನ್ನು ಒಬ್ಬರಿಗೆ ನೀಡಿ ಇಬ್ಬರ ವೇತನವನ್ನು ಒಬ್ಬರಿಗೆ ನೀಡುವ ಆದೇಶ ಇದಾಗಿದೆ ಎಂದರು.
ಪಂಜಾಬ್, ಹರಿಯಾಣ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳಂತೆ ಅವಧಿ ಮುಗಿಯುವವರೆಗೆ ಸೇವೆಗೆ ಅವಕಾಶ ನೀಡಬೇಕು. ಆದರೆ, ನೂತನ ಆದೇಶ ಅತಿಥಿ ಉಪನ್ಯಾಸಕರಿಗೆ ಮರಣ ಶಾಸನವಾಗಿದೆ. ಸೇವೆಯಲ್ಲಿದ್ದು ಹೋರಾಟ ಮಾಡುತ್ತಿರುವ ಆತಿಥಿ ಉಪನ್ಯಾಸಕರಿಗೆ ಸೇವಾ ವಿಲೀನತೆ ನೀಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜ.21ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಆತಿಥಿ ಉಪನ್ಯಾಸಕರ ನಿಯೋಗವನ್ನು ಭೇಟಿ ಮಾಡಿಸಿ ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ಸಂಘದ ಉಪಾಧ್ಯಕ್ಷೆ ವಿ.ಜಿ.ಆರತಿ, ಕಾರ್ಯದರ್ಶಿ ಸುರೇಶ್, ಸಂಚಾಲಕಿ ಎಸ್.ಎಂ. ನರ್ಮದಾ, ರಾಘವೇಂದ್ರ ರಾವ್, ಕೆಂಪರಾಜು, ಉಮೇಶ್, ವಿಜಯ್ ಕುಮಾರ್, ಸುಂದರಮ್ಮ ಇತರರಿದ್ದರು.