

ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ. ವ್ಯಾಪ್ತಿಯ ಉಚಗೇರಿಯಲ್ಲಿ ಬುಡಕಟ್ಟು ಜನಾಂಗದ ಸಿದ್ದಿ ಸಮುದಾಯದವರು ಅತಿಕ್ರಮಣ ಮಾಡಿ ಸಾಗುವಳಿ ಮಾಡಿಕೊಂಡಿದ್ದ ಜಮೀನಿನಲ್ಲಿ ಬೆಳೆದ ಬಾಳೆ-ಅಡಕೆ ಗಿಡಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಏಕಾಏಕಿ ಕಡಿದು ಹಾಕಿದ್ದಾರೆ.
ಉಚಗೇರಿಯಲ್ಲಿ ಅತಿಕ್ರಮಣ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಅತಿಕ್ರಮಣ ತೆರವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೋಗಿದ್ದರು. ಆ ವೇಳೆ ತನ್ನ ಅತಿಕ್ರಮಣವನ್ನು ಮಾತ್ರ ಏಕೆ ತೆರವುಗೊಳಿಸುವುದು, ಅಕ್ಕಪಕ್ಕದಲ್ಲಿ ಬೇರೆಯವರೂ ಅತಿಕ್ರಮಣ ಮಾಡಿ ಸಾಗುವಳಿ ಮಾಡಿಕೊಂಡಿದ್ದಾರೆ. ಅವರ ಜಾಗವನ್ನೂ ತೆರವುಗೊಳಿಸಿ ಎಂದು ಆ ವ್ಯಕ್ತಿ ಇಲಾಖೆ ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ. ಇದರಿಂದ ಕೋಪಗೊಂಡ ಅರಣ್ಯ ಇಲಾಖೆಯವರು ಅಕ್ಕಪಕ್ಕದ ಅತಿಕ್ರಮಿತ ಜಮೀನುಗಳಿಗೂ ನುಗ್ಗಿ ಅಡಕೆ-ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ.
ಸಮೀಪದಲ್ಲಿ ಸಿದ್ದಿ ಜನಾಂಗದ ವಿಧವೆಯೊಬ್ಬರು ಸಾಗುವಳಿ ಮಾಡಿಕೊಂಡಿದ್ದ ಸ್ಥಳದಲ್ಲಿ ಕ್ಷೇತ್ರ ನಿರ್ದಿಷ್ಟಪಡಿಸಿಕೊಳ್ಳದೇ, ವಿಚಾರಣೆಗೆ ಅವಕಾಶ ಕೊಡದೇ ಸಾಗುವಳಿಯ ಕ್ಷೇತ್ರದಲ್ಲಿ ಬೆಳೆದ ಬಾಳೆ-ಅಡಕೆ ಗಿಡಗಳನ್ನು ಕಡಿದು ಹಾಕಲಾಗಿದೆ. ಮಹಿಳೆ ಕೇವಲ ಎರಡು ತಿಂಗಳ ಹಿಂದಷ್ಟೇ ಪತಿಯನ್ನು ಕಳೆದುಕೊಂಡು ದುಃಖದಲ್ಲಿರುವ ಸಂದರ್ಭದಲ್ಲಿ ಅಧಿಕಾರಿಗಳು ಮಾನವೀಯತೆ ಮರೆತಿದ್ದಾರೆ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದಾರೆ.
ಎಂಎಲ್ಸಿ ಶಾಂತಾರಾಮ ಸಿದ್ದಿ ಭೇಟಿ; ಉಚಗೇರಿಯಲ್ಲಿ ಘಟನೆ ನಡೆದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಶುಕ್ರವಾರ ಭೇಟಿ ನೀಡಿ, ಸಾಂತ್ವನ ಹೇಳಿದರು. ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ, ಆಗಿರುವ ಅನ್ಯಾಯಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ತಾ.ಪಂ. ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸದಸ್ಯ ನಟರಾಜ ಗೌಡರ್, ಸಿದ್ದಿ ಯುವ ಹೋರಾಟ ಸಮಿತಿಯ ಶಂಕರ ಸಿದ್ದಿ, ಶೇಖರ ಸಿದ್ದಿ ಇತರರಿದ್ದರು.
ಉಚಗೇರಿಯ ಸಿದ್ದಿ ಸಮಾಜದವರ ಅತಿಕ್ರಮಣ ಜಮೀನಿನ ಮೇಲೆ ಅರಣ್ಯ ಸಿಬ್ಬಂದಿ ಕ್ರಮ ಜರುಗಿಸಿರುವುದಕ್ಕೆ ತನಿಖಾ ತಂಡ ರಚಿಸಿ, ಸೂಕ್ತ ತನಿಖೆಗೆ ಒಳಪಡಿಸಬೇಕು. | ಎ. ರವೀಂದ್ರ ನಾಯ್ಕ