ಅತಿಕ್ರಮಣ ತೆರವಿಗೆ ಶಾಸಕ ಅಬ್ಬಯ್ಯ ಅಡ್ಡಿ

h9-Muttannavar
Published on

ಹುಬ್ಬಳ್ಳಿ: ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರವು ಸೇರಿ ಅವಳಿ ನಗರದ ವಿವಿಧೆಡೆ ರಸ್ತೆ ಅತಿಕ್ರಮಣ ತೆರವಿಗೆ ಶಾಸಕ ಪ್ರಸಾದ ಅಬ್ಬಯ್ಯ ಅಡ್ಡಿಪಡಿಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ದೂರಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವಳಿನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಹಲವಾರು ದೇವಾಲಯಗಳನ್ನು ತೆರವುಗೊಳಿಸಲಾಗಿದೆ. ಆದರೆ, ಬಂಕಾಪುರ ಚೌಕ, ನ್ಯೂ ಇಂಗ್ಲಿಷ್ ಸ್ಕೂಲ್, ಭೈರಿದೇವರಕೊಪ್ಪದ ದರ್ಗಾ ಸೇರಿ ಇತರೆಡೆಯ ರಸ್ತೆ ಅತಿಕ್ರಮಣ ತೆರವಿಗೆ ಶಾಸಕ ಅಬ್ಬಯ್ಯ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ವೀರಾಪುರ ಓಣಿಯಲ್ಲಿ ನಿರ್ವಿುಸುತ್ತಿರುವ ಎಚ್​ಡಿ 1 ಕೇಂದ್ರ ಹಾಗೂ ಮಹಿಳೆಯರಿಗಾಗಿ ಸಮುದಾಯ ಭವನ ಕಟ್ಟಡ ಪಕ್ಕದ ಶೌಚಗೃಹಗಳು ಸಕ್ರಮ ಜಾಗದಲ್ಲಿದ್ದರೂ ಅತಿಕ್ರಮಣವೆಂದು ಅವುಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ಈ ಕಟ್ಟಡದ ಪಕ್ಕದಲ್ಲಿ ಅತಿಕ್ರಮಣವಾಗಿ ನಿರ್ವಿುಸಿರುವ ಮಹ್ಮದಗೌಸ್ ಖಾಜಾಹುಸೇನ ಗದಗಕರ ಎಂಬುವರ ಕಟ್ಟಡ ತೆರವುಗೊಳಿಸಲು ಶಾಸಕ ಅಬ್ಬಯ್ಯ ಅಡ್ಡಿಪಡಿಸುತ್ತಿದ್ದಾರೆ ಎಂದರು.

ಎಚ್​ಡಿ 1 ಕೇಂದ್ರ ಹಾಗೂ ಸಮುದಾಯ ಭವನದ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದರೂ ಪಕ್ಕದ ಅತಿಕ್ರಮಣ ಕಟ್ಟಡ ತೆರವುಗೊಳಿಸುತ್ತಿಲ್ಲ. ಅತಿಕ್ರಮಣ ತೆರವುಗೊಳಿಸಿದ ನಂತರವೇ ಕಟ್ಟಡದ ಇನ್ನುಳಿದ ಕಾಮಗಾರಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಸಮುದಾಯ ಭವನ ಕಟ್ಟಡ ಪಕ್ಕದ ಅತಿಕ್ರಮಣ ಸೇರಿ ಅವಳಿ ನಗರದ ರಸ್ತೆ ಪಕ್ಕದ ಎಲ್ಲ ಅತಿಕ್ರಮಣವನ್ನು 3 ದಿನಗಳೊಳಗೆ ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದ ಮುತ್ತಣ್ಣವರ, ಇಲ್ಲದಿದ್ದರೆ ಒಂದು ವಾರದ ನಂತರ ರೈತರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸೇರಿ ಬಾರಕೋಲು ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಮುತ್ತಣ್ಣವರ ಅಮಾನತು ಕೈಬಿಡಿ

ಹುಬ್ಬಳ್ಳಿ: ಬಿಜೆಪಿಯಿಂದ ಅಮಾನತುಗೊಳಿಸಿದ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಕುರುಬ ಸಮಾಜದ ಮುಖಂಡರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆಗೆ ಭೇಟಿ ನೀಡಿದ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಮುಖಂಡರು, ಯಾವುದೇ ಮುನ್ಸೂಚನೆ ನೀಡದೇ ಶಿವಾನಂದ ಮುತ್ತಣ್ಣವರ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದು ಖಂಡನೀಯ ಎಂದು ದೂರಿದರು. ಬಿಜೆಪಿ ಸಂಘಟನೆಗಾಗಿ ಶಿವಾನಂದ ಮುತ್ತಣ್ಣವರ ಶ್ರಮಿಸಿದ್ದಾರೆ. ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಬೇಕು ಹಾಗೂ ಗೌರವಯುತ ಸ್ಥಾನ ನೀಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಮುತ್ತಣ್ಣವರ ಅವರನ್ನು ಪಕ್ಷಕ್ಕೆ ಮರಳಿ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದರು. ಈ ವೇಳೆ ಈಶ್ವರ ಕಲ್ಲಪ್ಪನವರ, ಪಿ.ಎಸ್. ಇಸರಣ್ಣವರ, ಹನುಮಂತಪ್ಪ ಕರೆಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net