ಅತಿ ಹೆಚ್ಚು ಮತದಾನವಾಗಬೇಕೆಂಬ ಆಶಯ

Highest voting interast in DC
Bangalore Rural District Dc Interest the Higst Voting
Published on


ಬೆಂಗಳೂರು ಗ್ರಾಮಾಂತರ

ಹಬ್ಬದ ರೀತಿಯಲ್ಲಿ ಮತದಾನ ದಿನಾಚರಣೆ ಮಾಡಿ, ನೀವು ಮತದಾನ ಮಾಡಿ ನಿಮ್ಮ ಮನೆಯವರನ್ನು ಹಾಗೂ ನೆರೆಹೊರೆಯವರನ್ನು ಮತದಾನ ಮಾಡಲು ಪ್ರೇರೇಪಿಸಿ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ಆಗಬೇಕು ಎನ್ನುವುದು ಆಶಯದಿಂದ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾದ್ಯಂತ ಮತದಾನ ಜಾಗೃತಿ ಕುರಿತ ಸ್ವೀಪ್ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯಿತಿಯಿಂದ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಮತದಾನ ಪ್ರಕ್ರಿಯೆ ಪಾರದರ್ಶಕ ಹಾಗೂ ನೈತಿಕತೆಯಿಂದ ಕೂಡಿರಬೇಕು. ಜತೆಗೆ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದರು.
ಜಿಲ್ಲೆ, ತಾಲೂಕು, ಪುರಸಭೆಮಟ್ಟದ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಪಾಲ್ಗೊಂಡಿದ್ದರು. ಚುನಾವಣಾ ವಿಶೇಷ ಧ್ವಜವನ್ನು ಹಾರಿಸಲಾಯಿತು.ಮತದಾನದ ಮಹತ್ವ ಸಾರುವ ಬಲೂನುಗಳನ್ನು ಆಕಾಶಕ್ಕೆ ಹಾರಿ ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

562 ವಿಶೇಷ ಮತದಾರರು:ಜಿಲ್ಲೆಯಲ್ಲಿ 80 ವರ್ಷ ತುಂಬಿದ ಹಿರಿಯ ನಾಗರೀಕರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ವಿಶೇಷ ಮತದಾನ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿತ್ತು. ಜಿಲ್ಲೆಯ 562 ಮತದಾರರು ಇದರ ಸದುಪಯೋಗ ಪಡಿಸಿಕೊಂಡಿದ್ದಾರೆ. ಉಳಿದ ಮತದಾರರಿಗೆ ಮತದಾನ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಮತದಾರರ ಆಕರ್ಷಿಸಲು ಜಿಲ್ಲೆಯಲ್ಲಿ ವಿಷಯಾಧಾರಿತ (ಎಥ್ನಿಕ್)ಮತಗಟ್ಟೆಗಳು, ಮಾದರಿ ಮತಗಟ್ಟೆಗಳು, ಸಖಿ ಮತಗಟ್ಟೆಗಳು ಹಾಗೂ ಯುವಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲ ರೀತಿಯಲ್ಲೂ ಸಿದ್ದತೆ ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.
ಪ್ರತಿಜ್ಞಾ ವಿಧಿ ಸ್ವೀಕಾರ: ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನಾಗರಾಜ್ ಎಲ್ಲರಿಗೂ ಪ್ರತಿಜ್ಞಾ ವಿಧಿ ಭೋಧಿಸಿದರು. ಮತದಾನದ ಮಹತ್ವ ಸಾರುವ ರಂಗು ರಂಗಿನ ರಂಗೋಲಿಗಳನ್ನು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಕ್ರೀಡಾಂಗಣದಲ್ಲಿ ಬಿಡಿಸಿದ್ದು ಗಮನ ಸೆಳೆಯಿತು. ಚುನಾವಣಾ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಕಲಾಜಾಥಾಗಳೊಂದಿಗೆ ಅಧಿಕಾರಿಗಳು ಕ್ರೀಡಾಂಗಣದಿಂದ ವೇಣುಗೋಪಾಲಸ್ವಾಮಿ ದೇವಾಲಯದವರೆಗೆ ಜಾಥಾದಲ್ಲಿ ತೆರಳಿ ಮತದಾನ ಜಾಗೃತಿ ಮೂಡಿಸಲಾಯಿತು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಗಳು ಮತದಾನ ಜಾಗೃತಿಯ ಬೈಕ್ ರ‌್ಯಾಲಿಗೆ ಚಾಲನೆ ನೀಡಿದರು.
ದೂರು ಸಲ್ಲಿಸಬಹುದು:ಮತದಾನದ ಮಹತ್ವ ಅರಿತುಕೊಂಡು ಮೇ.10ರಂದು ತಪ್ಪದೇ ಮತದಾನ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ವರ್ಣಿತ್‌ನೇಗಿ ಹೇಳಿದರು. ಚುನಾವಣಾ ಅಕ್ರಮಚಟುವಟಿಕೆಗಳು ಕಂಡುಬಂದಲ್ಲಿ ಸಿ-ವಿಜಿಲ್ ಅಪ್ಲಿಕೇಶನ್ ಮೂಲಕ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net