ಅತಂತ್ರ ಸ್ಥಿತಿಯಲ್ಲಿ ಸುಡಗಾಡ ಸಿದ್ಧರು

10mul1
Published on

ಮುಳಗುಂದ: ಇನ್ನೊಬ್ಬರ ಭವಿಷ್ಯ ಹೇಳಿ ತಾವು ಬದುಕು ಸಾಗಿಸುತ್ತಿದ್ದ ಸುಡುಗಾಡ ಸಿದ್ಧರ ಬದುಕು ಅತಂತ್ರವಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ವಣವಾಗಿದೆ.

ಚಿಂಚಲಿ ಗ್ರಾಮದ ಮಲ್ಲಿಕಾರ್ಜುನ ನಗರದಲ್ಲಿ ಅಂದಾಜು 30 ಸುಡುಗಾಡ ಸಿದ್ಧರ ಕುಟುಂಬಗಳು ವಾಸವಾಗಿವೆ. ಸರ್ಕಾರ ಇವರಿಗೆ ವಸತಿ ಸೌಕರ್ಯವೇನೋ ಕಲ್ಪಿಸಿದೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ಒದಗಿಸುತ್ತಿರುವ ಯಾವ ಸೌಲಭ್ಯವೂ ಅವರಿಗೆ ಸಿಕ್ಕಿಲ್ಲ.

ಬೇರೆಯವರ ಭವಿಷ್ಯ ಹೇಳಿ ಬದುಕುತ್ತಿದ್ದ ಜನ, ಕಾಲ ಬದಲಾದಂತೆ ಕೆಲವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮತ್ತೆ ಕೆಲವರು ಜಾತ್ರೆ ಹಾಗೂ ಹಳ್ಳಿಗಳಿಗೆ ತೆರಳಿ ಸ್ಟೇಷನರಿ ವಸ್ತು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವ ಕಾಯಕಕ್ಕೆ ಹೊಂದಿಕೊಂಡಿದ್ದಾರೆ. ಮಾರಕ ರೋಗ ಕರೊನಾದ ಕರಿಛಾಯೆ ಆವರಿಸಿದ ಮೇಲೆ ಒಂದೂವರೆ ತಿಂಗಳಿಂದ ಕೂಲಿ ಹಾಗೂ ವ್ಯಾಪಾರಕ್ಕೆ ಕಲ್ಲು ಬಿದ್ದಿದೆ.

ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು ಬಡ ಕುಟುಂಬದವರಿಗೆ ಆಹಾರ ಧಾನ್ಯದ ಕಿಟ್​ಗಳನ್ನು ನೀಡಿ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಆದರೆ, ಸುಡುಗಾಡ ಸಿದ್ಧರ ಸಂಕಷ್ಟ ಮಾತ್ರ ಯಾರಿಗೂ ಕಾಣಿಸುತ್ತಿಲ್ಲ. ಸರ್ಕಾರ ಇತರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೊಷಿಸಿದಂತೆ ನಮ್ಮ ಸಮುದಾಯಕ್ಕೂ ಏನಾದರೂ ಅನುಕೂಲ ಮಾಡಬಹುದು ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಜನ.

ಇತರ ಸಮುದಾಯಗಳನ್ನು ಪರಿಗಣಿಸಿದ ಸರ್ಕಾರ ನಮ್ಮ ಸಮುದಾಯವನ್ನು ದೂರವಿಟ್ಟಿರುವುದು ನೋವಿನ ಸಂಗತಿ. ನಾವು ಯಾವುದೇ ಆಸ್ತಿ, ಸಂಪತ್ತು ಹೊಂದಿದವರಲ್ಲ. ನಮ್ಮಲ್ಲಿ ಕೆಲವರ ಸ್ಥಿತಿ ಗಂಭೀರವಿದೆ. ಸರ್ಕಾರ ಸಹಾಯ ಮಾಡಿ ನಮ್ಮ ಸಂಕಷ್ಟ ಬಗೆಹರಿಸಬೇಕು.| ವೆಂಕಪ್ಪ ಗಿರಿಮಲ್ಲಪ್ಪ ಡೊಕ್ಕಣ್ಣವರ ಸಮುದಾಯದ ಮುಖಂಡ, ಚಿಂಚಲಿ

ಸುಡುಗಾಡ ಸಿದ್ಧರ ಸಮುದಾಯಕ್ಕೆ ಯಾವುದೇ ಆಹಾರ ಕಿಟ್ ವಿತರಣೆ ಮಾಡಿಲ್ಲ. ಮಾಸ್ಕ್ ವಿತರಣೆ ಮಾಡಿದ್ದೇವೆ ಹೊರತು ಬೇರೆ ಯಾವುದು ಕೊಟ್ಟಿಲ್ಲ. ನ್ಯಾಯ ಬೆಲೆ ಅಂಗಡಿಯಲ್ಲಿ 3 ತಿಂಗಳ ರೇಷನ್ ವಿತರಣೆ ಆಗಿದೆ.| ಎಸ್.ಎಸ್. ತೊಂಡಿಹಾಳ, ಸಿಡಿಒ, ಗ್ರಾಪಂ, ಚಿಂಚಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net