ಅತಂತ್ರ ಸ್ಥಿತಿಯಲ್ಲಿ ಬಯಲು ಕಮ್ಮಾರರು

3 lxr 4.a
Published on

ಲಕ್ಷ್ಮೇಶ್ವರ: ಕರೊನಾ ಭೀತಿಯಿಂದಾಗಿ ಇಡೀ ದೇಶವೇ ಲಾಕ್​ಡೌನ್ ಘೊಷಣೆಯಲ್ಲಿ ಇರುವುದರಿಂದ ಅಲೆಮಾರಿ ಕುಟುಂಬಗಳೀಗ ಅತಂತ್ರ ಸ್ಥಿತಿಯಲ್ಲಿವೆ. ಪಟ್ಟಣದ ಹೊರವಲಯದಲ್ಲಿ ಬೀಡುಬಿಟ್ಟಿರುವ ಬಯಲು ಕಮ್ಮಾರರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ವಣವಾಗಿದೆ. ಬಯಲು ಕಮ್ಮಾರರು ಸಿದ್ಧಪಡಿಸಿ ಕೊಡುವ ಕೃಷಿ ಉಪಕರಣಗಳನ್ನು ಯಾರೂ ಕೇಳುವವರಿಲ್ಲದಂತಾಗಿದೆ.

ಬಡತನ, ಅನಕ್ಷರತೆಯಿಂದ ಅಂದಿನ ದುಡಿಮೆಯ ಫಲದಿಂದ ಬಂದ ದುಡ್ಡಿನಲ್ಲಿ ಜೀವನ ಸಾಗಿಸುವ ಇವರು ಇದೀಗ ಬದುಕು ಸಾಗಿಸುವುದೇ ದುಸ್ತರವಾಗಿದೆ. ಮುಂದಿನ ಊರಿಗಾದರೂ ಹೋಗಿ ಬದುಕಿದರಾಯಿತೆಂದರೂ ಅದಕ್ಕೂ ಅವಕಾಶವಿಲ್ಲ. ಜೀವನಾವಶ್ಯಕ ಸಾಮಾನು ಸರಂಜಾಮುಗಳೊಂದಿಗೆ ಮಕ್ಕಳು, ವಯೋವೃದ್ಧರು ಸೇರಿ ಕುಟುಂಬವನ್ನು ಊರಿಂದೂರಿಗೆ ಸಾಗಿಸುವ ಗೂಡ್ಸ್ ಗಾಡಿಯೇ ಇವರಿಗೆ ಆಶ್ರಯ ತಾಣವಾಗಿದೆ.

ರೈತ ಸಮುದಾಯಕ್ಕೆ ಬೇಕಾಗುವ ಕುಡಗೋಲು, ಕುಂಟೆಯ ಕುಡ, ತಾಳು, ಕೊಡಲಿ, ಸಲಿಕೆ, ಕುರ್ಚಗಿ, ಫಿಕಾಸಿ, ಕಂದಲಿ, ಗುದ್ದಲಿ ಹೀಗೆ ಹತ್ತಾರು ಸಲಕರಣೆಗಳನ್ನು ಸಿದ್ಧಪಡಿಸಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಾರೆ. ಪುರುಷರು ಕಬ್ಬಿಣವನ್ನು ಕಾಯಿಸಿದರೆ ಮಹಿಳೆಯರು ಕಾಯ್ದ ಕಬ್ಬಿಣಕ್ಕೆ ಒಂದು ರೂಪ ಬರುವಂತೆ ಮಾಡುತ್ತಾರೆ. ಮಹಾರಾಷ್ಟ್ರ ಮೂಲದ ಇವರು ಊರೂರು ಅಲೆಯುತ್ತ ರೈತರ ಕೃಷಿ ಸಲಕರಣೆಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ಮೂಲಕ ಬದುಕು ಸಾಗಿಸುತ್ತಾರೆ. ಆ ಊರಿನಲ್ಲಿ ತಮ್ಮ ವಸ್ತುಗಳಿಗೆ ಬೇಡಿಕೆ ಇಲ್ಲ ಕೆಲಸವಿಲ್ಲ ಎಂಬುದನ್ನರಿತು ಮುಂದಿನ ಊರಿಗೆ ತಮ್ಮ ಟಂಟಂನೊಂದಿಗೆ ಪಯಣ ಬೆಳೆಸುತ್ತಾರೆ. ದೊಡ್ಡ ಗ್ರಾಮ, ಪಟ್ಟಣದ ಹೊರವಲಯದ ಸಾಲಿಗುಡಿ, ರಸ್ತೆ ಪಕ್ಕದ ಖಾಲಿ ನಿವೇಶನದಲ್ಲಿ ನಾಲ್ಕಾರು ದಿನಗಳ ಕಾಲ ನೆಲೆ ನಿಲ್ಲುತ್ತಾರೆ.

ಮಹಾರಾಷ್ಟ್ರ ಮೂಲದವರಾದರೂ ತಮ್ಮ ವೃತ್ತಿ ಮೂಲಕ ಊರಿಂದೂರಿಗೆ ಸಂಚರಿಸುವ ಈ ಬಯಲು ಕಮ್ಮಾರರು ಲಾಕ್​ಡೌನ್​ನಿಂದ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ತಾಲೂಕಾಡಳಿತದಿಂದ ಜೀವನಾವಶ್ಯಕ ವಸ್ತುಗಳನ್ನು ಅವರಿಗೆ ಒದಗಿಸಲಾಗಿದೆ.| ಭ್ರಮರಾಂಬ ಗುಬ್ಬಿಶೆಟ್ಟಿ ತಹಸೀಲ್ದಾರ್

ಅವತ್ ದುಡಿದು ಬಂದ ದುಡ್ಡಿನಲ್ಲಿ ಜೀವನಾ ಸಾಗಿಸೋ ಜನಾ ನಾವು. ಈಗ ಕೈಯಲ್ಲಿ ಬಿಡಿಗಾಸೂ ಇಲ್ಲ. ಇದರಿಂದಾಗಿ ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಲಕ್ಷ್ಮೇಶ್ವರದ ಕೆಲ ಸಂಘಟನೆಯವರು, ದಾನಿಗಳು ಕೊಡುವ ದಿನಸಿ, ಆಹಾರದಿಂದ ದಿನ ದೂಡುತ್ತಿದ್ದೇವೆ. ಇದುವೇ ನಮಗೆ ಸಂಜೀವಿನಿಯಾಗಿದೆ.|ಕಬೀರ್ ಅಲೆಮಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net