ಅಣ್ಣೂರಲ್ಲಿ ನೆಲೆಸಿರುವ ತ್ರಿಮೂರ್ತಿಗಳು!

VISHNUTIMMAPPA DEVALAYA
ಕೆ.ಎಂ.ದೊಡ್ಡಿ ಸಮೀಪದ ಅಣ್ಣೂರು ಗ್ರಾಮದಲ್ಲಿರುವ ಅಮೃತೇಶ್ವರ, ವಿಷ್ಣು ದೇವಾಲಯದ ಹೊರನೋಟ.
Published on

ಕೆ.ಎಂ.ದೊಡ್ಡಿ: ದೇಶದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ದೇವಾಲಯಗಳಿರುವುದು ಮೂರು ಕಡೆ ಮಾತ್ರ. ಅವುಗಳಲ್ಲಿ ಕೆ.ಎಂ.ದೊಡ್ಡಿ ಸಮೀಪದ ಅಣ್ಣೂರು ಗ್ರಾಮವೂ ಒಂದಾಗಿರುವುದು ವಿಶೇಷವಾಗಿದೆ.

ಭಾರತದ ಮುಂಬೈನ ಎಲಿಫೆಂಟಾ ಗುಹೆಗಳಲ್ಲಿನ ಮುಖ್ಯ ದೇವತೆ (ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವೂ ಆಗಿದೆ), ತ್ರಿಮೂರ್ತಿಗಳ ದೊಡ್ಡ ಕಲ್ಲಿನ ಶಿಲ್ಪವಾಗಿದೆ. ಇಲ್ಲಿ ಮೂರು ದೇವಾಲಯಗಳಿವೆ, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೆ ಪ್ರತ್ಯೇಕ ದೇವಾಲಯ ನಿರ್ಮಿಸಲಾಗಿದೆ. ಅಲ್ಲದೆ, ಅವರ ವಾಹನಗಳಿಗೆ ಪ್ರತ್ಯೇಕ ದೇವಾಲಯಗಳಿವೆ.
ಮಿತ್ರನಂತಪುರಂ ತ್ರಿಮೂರ್ತಿ ದೇವಾಲಯವು ಭಾರತದ ಕೇರಳದ ತಿರುವನಂತಪುರಂನಲ್ಲಿರುವ ಹಿಂದು ದೇವಾಲಯ ಸಂಕೀರ್ಣವಾಗಿದೆ. ಇದು ಭಕ್ತಾದಿಗಳು ಬ್ರಹ್ಮ, ವಿಷ್ಣು ಮತ್ತು ಶಿವನಿಗೆ ಪೂಜೆ ಸಲ್ಲಿಸುವ ದೇವಾಲಯವಾಗಿದೆ. ಇದು ಪದ್ಮನಾಭಸ್ವಾಮಿ ದೇವಾಲಯದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿದೆ.

ಈ ಎರಡನ್ನು ಹೊರತುಪಡಿಸಿ ಇನ್ನೆಲ್ಲೂ ಕಾಣಸಿಗದ, ಪ್ರಚಾರಕ್ಕೆ ಬಾರದ ಅಣ್ಣೂರು, ಶ್ರೀಫಲದ ಊರು ಎಂದು ಕರೆಯುವ ಈ ಗ್ರಾಮದಲ್ಲಿ ತ್ರಿಮೂರ್ತಿಗಳಿಗೆ ದೇವಾಲಯಗಳಿವೆ.

ಕೆ.ಎಂ.ದೊಡ್ಡಿಯಿಂದ ಕೂಗಳತೆ ದೂರದಲ್ಲಿರುವ ಈ ಗ್ರಾಮವು ಸಾವಿರಾರು ವರ್ಷಗಳ ಹಿಂದೆ ಯುದ್ಧ ಭೂಮಿಯಾಗಿತ್ತು. ರಣಭೂಮಿಯಾದ ಈ ಊರಿನಲ್ಲಿ ಎಲ್ಲೆಂದರೆ ಅಲ್ಲಿ ನೆತ್ತರು ಹರಿದು ಹೆಪ್ಪುಗಟ್ಟಿತ್ತು. ನೆತ್ತರು ತುಂಬಿದ ಒಡಲನ್ನು ನೋಡಲಾಗದು ಎಂದು ಇಲ್ಲಿಯ ಅಳಿದುಳಿದ ವಾಸಿಗಳು ದೇವರ ಮೊರೆ ಹೋದಾಗ ದೇವತೆಗಳು ಅನುಗ್ರಹಿಸಿ ಫಲಗಳ ಮರಗಳನ್ನು ಅನುಗ್ರಹಿಸಿದರು. ಮುಂದೆ ಈ ಗ್ರಾಮ ಶ್ರೀಫಲ ಗ್ರಾಮ, ಹಣ್ಣುಗಳ ಊರು ಆಯಿತು.

ಕಾಲ ಬದಲಾದಂತೆ ಹಣ್ಣುಗಳ ಊರು ಎಂಬುದು ಅಣ್ಣೂರು ಆಯಿತೆಂದು ನಂಬಲಾಗಿದೆ. ಈ ಗ್ರಾಮದಲ್ಲಿ ಕಾಲಾನಂತರದಲ್ಲಿ ತ್ರಿಮೂರ್ತಿಗಳು ಬಂದು ನೆಲೆ ನಿಂತರು ಎಂದು ಹೇಳಲಾಗಿದೆ. ಬ್ರಹ್ಮನು ಬೊಮ್ಮಲಿಂಗೇಶ್ವರನಾಗಿ, ವಿಷ್ಣುವು ತಿಮ್ಮಪ್ಪನಾಗಿ, ಮಹೇಶ್ವರನು ಅಮೃತೇಶ್ವರನಾಗಿ ಇಲ್ಲಿ ನೆಲೆಸಿದ್ದಾರೆ.

ತ್ರಿಮೂರ್ತಿಗಳ ಜತೆಗೆ ಆದಿಶಕ್ತಿಯಾದ ಮಹಾಕಾಳಿಯೂ ಇಲ್ಲಿ ನೆಲೆ ನಿಂತಿದ್ದಾಳೆ. ಈ ಎಲ್ಲ ದೇವರುಗಳು ಭಕ್ತರನ್ನು ರಕ್ಷಿಸುತ್ತಾ, ಮನೋಭಿಲಾಷೆಗಳನ್ನು ಈಡೇರಿಸುತ್ತಾ ಬಂದಿವೆ ಎಂಬ ನಂಬಿಕೆ ಇಲ್ಲಿದೆ. ವಿಪರ್ಯಾಸವೆಂದರೆ ಈ ಗ್ರಾಮವು ಪ್ರವಾಸಿ ತಾಣವಾಗದೆ, ಕೊಂಪೆಯಾಗಿಯೇ ಉಳಿದಿದೆ.

ಪೀಡೆ ಪಿಶಾಚಿಗಳ ಕಾಟ ತಪ್ಪಿಸಲು ಗಡಿ ಕಾವಲು: ಗ್ರಾಮದ ಹೊರ ವಲಯದಲ್ಲಿ ನೆಲೆ ನಿಂತಿರುವ ಬೊಮ್ಮಲಿಂಗೇಶ್ವರ(ಬ್ರಹ್ಮಲಿಂಗೇಶ್ವರ) ದೇವರು, ಭೈರವೇಶ್ವರ ದೇವರು ಗ್ರಾಮಕ್ಕೆ ಯಾವುದೇ ರೀತಿಯ ಪೀಡೆ, ಪಿಶಾಚಿಗಳ ಕಾಟ ಇಲ್ಲದಂತೆ ಗಡಿ ಕಾಯುತ್ತಿವೆ. ಹಿಂದೆ ಒಮ್ಮೆ ಗ್ರಾಮದವರೊಬ್ಬರು ತಮ್ಮ ಜಮೀನಿನಲ್ಲಿ ನೀರು ಹಾಯಿಸಲು ಹೋದಾಗ ಪಿಶಾಚಿಯೊಂದು ಮೈಮೇಲೆರಗಿ ಕಾಟ ಕೊಡಲು ಆರಂಭಿಸಿತು. ಆಗ ಆ ವ್ಯಕ್ತಿ ಬೊಮ್ಮಪ್ಪ ಕಾಪಾಡು ಎಂದು ಕೂಗು ಹಾಕಿದರಂತೆ. ತಕ್ಷಣವೇ ಬೆಂಕಿಯುಂಡೆಯಂತಹ ಆಕಾರವೊಂದು ಕುದುರೆಯೇರಿ ಬಂದು ಚಾಟಿಯಲ್ಲಿ ಪಿಶಾಚಿಗೆ ಹೊಡೆಯಿತು. ಹೊಡೆತ ತಾಳಲಾರದೆ ಪಿಶಾಚಿಯು ಚೀರುತ್ತಾ ಗ್ರಾಮದ ಗಡಿ ಬಿಟ್ಟು ಹೋಯಿತೆಂಬ ಕಥೆ ಈಗಲೂ ಚಾಲ್ತಿಯಲ್ಲಿದೆ.

ಮಹಾಕಾಳಿಗೆ ಬಿರುದು ಕೊಟ್ಟ ಮಹಾರಾಜರು: ಮೈಸೂರನ್ನು ಮಹಾರಾಜರು ಆಳುತ್ತಿದ್ದ ಕಾಲಘಟ್ಟದಲ್ಲಿ ಮಹಾಕಾಳಿ ದೇವರನ್ನು ಭಕ್ತರೊಬ್ಬರು ಪೂಜೆ ಕರೆದೊಯ್ದಿದ್ದರು. ಇದು ಹೆಣ್ಣು ದೇವರಾದ್ದರಿಂದ ನಂದಿ ಕಂಬ ಇರಬೇಕಿತ್ತು. ಆದರೆ ನಂದಿ ಕಂಬ ಇಲ್ಲದ ಹಿನ್ನೆಲೆಯಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿದ್ದ ಭಕ್ತರು ಮಹಾಕಾಳಿಯನ್ನು ಬಂಧನಲ್ಲಿರಿಸಿಕೊಂಡಿದ್ದರಂತೆ. ಈ ವಿಚಾರ ಮಹಾರಾಜರಿಗೆ ತಿಳಿದು ಅವರನ್ನು ಕರೆಯಿಸಿ ಬುದ್ಧಿ ಹೇಳಿ ಮಹಾಕಾಳಿ ದೇವರನ್ನು ಯಾರೂ ಬಂಧಿಸಿಡಬಾರದು ಎಂದು ಬಿರುದು ನೀಡಿ ತಾಮ್ರದಲ್ಲಿ ನಂದಿ ಕಂಬದಲ್ಲಿ ಬರೆಸಿರುವುದನ್ನು ಇಂದಿಗೂ ಇಲ್ಲಿಯ ಮಹಾಕಾಳಿ ದೇವಿಯ ನಂದಿ ಕಂಬದಲ್ಲಿ ಕಾಣಬಹುದಾಗಿದೆ. ಈ ದೇವತೆ ಬಹಳ ಶಕ್ತಿ ದೇವತೆಯಾಗಿದ್ದು, ರಾಜ್ಯದ ಹಲವೆಡೆಯಿಂದ ಭಕ್ತರು ಇಲ್ಲಿಗೆ ಪೂಜೆಗೆ ಆಗಮಿಸುತ್ತಾರೆ.

ಈ ಗ್ರಾಮದ ನಿರ್ಮಾಣ ಕಾಲದಲ್ಲಿ ರಾಹು (ಗ್ರಹ) ನನಗೆ ಬಲಿ ಬೇಕು ಎಂದು ಗ್ರಾಮದವರನ್ನು ಕೇಳಿತಂತೆ. ಅದಕ್ಕೆ ಗ್ರಾಮದವರು ಬೇರೆ ಊರಿನವರು ಇಲ್ಲಿಗೆ ಬಂದು ಆಕಸ್ಮಿಕವಾಗಿ ಕೆಳಗೆ ಬಿದ್ದರೆ ಅವರನ್ನು ನೀನು ಬಲಿ ಪಡೆಯಬಹುದೆಂದು ತಿಳಿಸಿದ್ದರಂತೆ. ಹಾಗೇ ಈ ಗ್ರಾಮಕ್ಕೆ ಬಂದು ನೆಲದ ಮೇಲೆ ಬಿದ್ದು ಗಾಯಗೊಂಡವರರನ್ನು ರಾಹು ಗ್ರಹ ಬಲಿ ಪಡೆಯಿತು ಎಂಬ ಮಾತಿದೆ. ಹಾಗಾಗಿ ಈ ಗ್ರಾಮಕ್ಕೆ ಇಂದಿಗೂ ಹಬ್ಬ, ಹರಿದಿನಗಳಿಗೆ ಬರುವ ನೆರೆ ಊರಿನ ನೆಂಟರಿಷ್ಟರು, ಮಕ್ಕಳು ಒಂದು ವೇಳೆ ಬಿದ್ದರೆ ಬಿದ್ದ ಸ್ಥಳದಲ್ಲಿ ಪ್ರಾಣಿ, ಪಕ್ಷಿಗಳನ್ನು ಬಲಿಕೊಡುವ ಪ್ರತೀತಿ ಬೆಳೆದುಕೊಂಡು ಬಂದಿದೆ. ಇನ್ನೂ ಕೆಲವರು ಮೊಟ್ಟೆ ಒಡೆದು ಪೂಜೆ ಸಲ್ಲಿಸುವ ವಾಡಿಕೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಆದರೆ ಇದೇ ಊರಿನವರಿಗೆ ಈ ನಿಯಮ ಅನ್ವಯಿಸುವುದಿಲ್ಲ.

ಹೂವು ಕೇಳುವ ವಾಡಿಕೆ: ವಿಷ್ಣುವಿನ ಪ್ರತಿರೂಪವಾದ ತಿಮ್ಮಪ್ಪ ದೇವಾಲಯದ ಬಳಿ ಶತಮಾನಗಳ ಹಿಂದೆ ಗ್ರಾಮದ ಯಜಮಾನರು ಊರುತೊಂದರೆಗೀಡಾದಾಗ ಹೂವು ಕೇಳುವ ವಾಡಿಕೆಯಿತ್ತು. ಒಮ್ಮೆ ಗ್ರಾಮದ ಪಾಳೆಗಾರರೊಬ್ಬರು ಗ್ರಾಮಕ್ಕೆ ಮಹಾಮಾರಿ ಬಂದೊಕ್ಕರಿಸಿದ ಸಂದರ್ಭ ಹೂವು ಕೇಳಲು ತಿಮ್ಮಪ್ಪ ದೇವಾಲಯದ ಬಳಿಗೆ ಬಂದಾಗ ಹೂವು ನೇರವಾಗಿ ಪಾಳೇಗಾರರ ಮುಂದೆಯೇ ಬಿತ್ತೆಂದು ಹಿರಿಯರು ಹೇಳುತ್ತಾರೆ.

ಅಣ್ಣೂರು ಗ್ರಾಮದಲ್ಲಿ ತ್ರಿಮೂತ್ರಿಗಳ ದೇವಾಲಯವಿದ್ದು, ಈ ದೇವಾಲಯಗಳ ಅಭಿವೃದ್ಧಿಯನ್ನು ಮಾಡಲು ಯಾರೂ ಮುಂದಾಗಿಲ್ಲ. ಬ್ರಹ್ಮ, ವಿಷ್ಣು, ಮಹೇಶ್ವರರ ದೇವಾಲಯಗಳನ್ನು ಗ್ರಾಮಸ್ಥರು ಸಾಧ್ಯವಾದಷ್ಟು ಮಟ್ಟಿಗೆ ರಕ್ಷಿಸಿದ್ದು, ಮುಂದಿನ ದಿನಗಳಲ್ಲಿ ಇದನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು.
ಎ.ಎಸ್.ರಾಜೀವ್
ನಾಡಗೌಡರು, ಅಣ್ಣೂರು.

ಗ್ರಾಮದಲ್ಲಿನ ತ್ರಿಮೂರ್ತಿ ದೇವರು, ಜತೆಗೆ ಮಹಾಕಾಳಿ, ಮಂಚಮ್ಮ ದೇವರು ಬಹಳ ಶಕ್ತಿಯುಳ್ಳವರಾಗಿದ್ದು, ಭಕ್ತರ ಕೋರಿಕೆಗಳನ್ನು ಇಂದಿಗೂ ಈಡೇರಿಸುತ್ತಾ, ರಕ್ಷಿಸುತ್ತಾ ಬಂದಿವೆ. ಪ್ರತಿ ಹಬ್ಬಗಳಲ್ಲೂ ನಡೆಯುವ ಮೆರವಣಿಗೆಯಲ್ಲಿ ಮಹಾಕಾಳಿ ಪೂಜೆ, ನಂದಿ ಕಂಬ, ತಿಮ್ಮಪ್ಪ ವಾಹನ, ಅಟ್ಟಿಮಾರಮ್ಮನ ಪೂಜೆ ಮುಂಚೂಣಿಯಲ್ಲಿರುತ್ತವೆ. ಮಹಾಕಾಳಿ ದೇವರನ್ನು ಮೆರೆಯುವ ಸಂದರ್ಭ ತಮ್ಮ ಕೋರಿಕೆಗಳನ್ನು ಭಿನ್ನವಿಸಿಕೊಳ್ಳಲು ಸಹಸ್ರಾರು ಭಕ್ತಾದಿಗಳು ಇಂದಿಗೂ ಬರುತ್ತಾರೆ.
ಸೊಸೈಟಿ ಕರಿಯಪ್ಪ
ಗ್ರಾಮದ ಮುಖಂಡ ಅಣ್ಣೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net