

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿಯ ಅಣ್ಣಾ ಸೌಹಾರ್ದ ಸಹಕಾರಿ ಸಂಘ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ೩.೩೬ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಸಂದೀಪ ಕತ್ತಿ ತಿಳಿಸಿದರು.
ಸಂಘದ ಕಚೇರಿಯಲ್ಲಿ ಈಚೆಗೆ ಸುದ್ದಿಗಾರರೊಂದಿಗೆ ಮಾತನಾಡಿ, ೩ ವರ್ಷಗಳ ಹಿಂದೆ ಪ್ರಾರಂಭವಾದ ಸಹಕಾರಿ ೧೩೧ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ೧೨೩.೪೦ ಕೋಟಿ ರೂ. ಠೇವಣಿ ಸಂಗ್ರಹಿಸಿ, ಜನರಿಗೆ ೧೨೭ ಕೋಟಿ ರೂ. ಸಾಲ ವಿತರಿಸಿದೆ ಎಂದರು. ಶೇ.೧೦೦ ಸಾಲ ವಸೂಲಾಗಿದೆ. ಸದಸ್ಯರಿಗೆ ಶೇ.೧೫ ಲಾಭಾಂಶ ಹಂಚಲಾಗಿದೆ. ಮುಂಬರುವ ದಿನಗಳಲ್ಲಿ ಸಹಕಾರಿ ಆರ್ಥಿಕತೆ ಹೆಚ್ಚಿಸುವ ಜತೆಗೆ ಸಮಾಜಮುಖಿ ಕಾರ್ಯಗಳಿಗೂ ಆದ್ಯತೆ ನೀಡುತ್ತೇವೆ ಎಂದರು.
ಉಪಾಧ್ಯಕ್ಷ ರಾಹುಲ ಖೇಮಲಾಪುರೆ, ನಿರ್ದೇಶಕರಾದ ಸುಧೀರ ಕತ್ತಿ, ದೀಪಕ ಮುರಗಾಲಿ, ಮುರಗೇಶ ಮಾಳಗಿ, ಮಹ್ಮದ್ ಯಾಸಿನ್ ಕಲೈಗಾರ, ಮಹಾವೀರ ಹಲಕರ್ಣಿ, ಸೂರಜ ಬೆಲ್ಲದ, ರಮೇಶ ಕರಿಗಾರ, ಲಖನ್ ಶ್ರೀಖಂಡೆ, ರೂಪಾ ಚರಾಟಿ, ದಿವ್ಯಾ ಮಾಳಗಿ ಇತರರಿದ್ದರು.