

ಕೊಳ್ಳೇಗಾಲ : ಪಟ್ಟಣದ ಅಣಗಳ್ಳಿ ಬಡಾವಣೆಯಲ್ಲಿ ಶನಿವಾರ ಶ್ರೀ ಕ್ಷೇತ್ರ ಕುರುಬನಕಟ್ಟೆ ಕಂಡಾಯಗಳ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರ ರಾತ್ರಿ ಪಟ್ಟಣದ ನಗರಸಭೆ ಪಂಪ್ ಹೌಸ್‌ನಲ್ಲಿ ಶ್ರೀ ಮಠದ ಕಂಡಾಯಗಳನ್ನು ನೀಲಗಾರರು ಸ್ವಚ್ಛಗೊಳಿಸಿ ವಿವಿಧ ಹೂವು, ಹೊಂಬಾಳೆ, ಧರಿಸಿ ಅಲಂಕೃತಗೊಳಿಸಿದರು. ಬಳಿಕ ಧೂಪ-ಕರ್ಪೂರ, ಮಂಗಳಾರತಿ ಬೆಳಗಿ ಭಕ್ತಿ-ಭಾವದಿಂದ ಪೂಜೆ ಸಲ್ಲಿಸಲಾಯಿತು.
ನಂತರ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಂಡಾಯಗಳನ್ನು ವಾದ್ಯದ ಹಿಮ್ಮೇಳದಲ್ಲಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಯುವಕರು ಪಟಾಕಿ ಸಿಡಿಸಿ ಮತ್ತು ಕುಣಿದು ಸಂಭ್ರಮಿಸಿದರು. ಕೊನೆಗೆ ಅಣಗಳ್ಳಿ ಬಡಾವಣೆಗೆ ಪ್ರವೇಶಿಸಿದ ಕಂಡಾಯಗಳನ್ನು ಬಡಾವಣೆ ಯಜಮಾನರು ಹಾಗೂ ಮುಖಂಡರು ಪೂಜೆ ಸಲ್ಲಿಸಿ ಬರಮಾಡಿಕೊಂಡು ಕಾಲಭೈರವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ರಾತ್ರಿ ಇರಿಸಲಾಗಿತ್ತು. ಮರುದಿನ ಶನಿವಾರ ಬೆಳಗ್ಗೆ ನಿತ್ಯ ಪೂಜೆ ಸಲ್ಲಿಸಿ ಮಧ್ಯಾಹ್ನ 2 ಗಂಟೆ ಬಳಿಕ ಬಡಾವಣೆಯ ಪ್ರತಿ ರಸ್ತೆಯಲ್ಲೂ ಮೆರವಣಿಗೆ ಮಾಡಲಾಯಿತು. ಮನೆ ಮನೆ ಮುಂದೆ ಕಂಡಾಯಗಳಿಗೆ ಭಕ್ತರು ಹಣ್ಣು-ಕಾಯಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.
ಕಂಡಾಯಗಳ ಉತ್ಸವ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನೆಂಟರು ಹಾಗೂ ಆತ್ಮೀಯರು, ಹಿತೈಷಿಗಳನ್ನು ಕರೆದು ಊಟ-ಉಪಚಾರ ಮಾಡಲಾಯಿತು. ಬಡಾವಣೆ ಹಸಿರು ತೋರಣ ಹಾಗೂ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಬಡಾವಣೆ ಯಜಮಾನರಾದ ಮಹದೇವ, ಶಿವಣ್ಣ, ರಾಚಯ್ಯ, ಚಿಕ್ಕಣ್ಣ, ನಾರಾಯಣ ಮೂರ್ತಿ, ವಿಶ್ವ ರತ್ನ ಡಾ.ಬಿ .ಆರ್.ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಇದ್ದರು.