

ಗದಗ: ಅಣ್ಣಿಗೇರಿ ತಾಲೂಕಿನ ಅಡ್ನೂರು, ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ರಾಜೂರು ಹಾಗೂ ಗದಗ ನಗರದ ಹಾತಲಗೇರಿ ರಸ್ತೆಯ ಬ್ರಹನ್ಮಠದ ಪಟ್ಟಾಧ್ಯಕ್ಷ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ (70) ಶುಕ್ರವಾರ ಲಿಂಗೈಕ್ಯರಾದರು. ಶ್ರೀಗಳು ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕ್ರಿಯಾ ಮೂರ್ತಿಗಳಾಗಿದ್ದರು.
ತೋಂಟದ ಶ್ರೀಗಳ ಕಂಬನಿ: ಪಂಚಾಕ್ಷರ ಶಿವಾಚಾರ್ಯರು ಲಿಂಗೈಕ್ಯರಾಗಿದ್ದಕ್ಕೆ ಡಂಬಳ-ಗದಗ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಕಂಬನಿ ಮಿಡಿದಿದ್ದಾರೆ. ಪಂಚಾಕ್ಷರ ಶಿವಾಚಾರ್ಯರು ಅತ್ಯಂತ ಆಚಾರನಿಷ್ಠರಾಗಿದ್ದರು. ಗ್ರಾಮೀಣ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದರು. ಕುಕನೂರು ತಾಲೂಕಿನ ರಾಜೂರಿನಲ್ಲಿ ಸತತ ಮೂರು ದಶಕಗಳ ಕಾಲ ಪುರಾಣ ಪ್ರವಚನ ನಡೆಸಿ, ಜನರಲ್ಲಿ ಧಾರ್ವಿುಕ ಜಾಗೃತಿ ಮೂಡಿಸಿದ್ದರು ಎಂದು ತಿಳಿಸಿದ್ದಾರೆ. ಶ್ರೀಗಳ ನಿಧನಕ್ಕೆ ಮುಕ್ತಿಮಂದಿರದ ವೀರಮುಕ್ತಿಮುನಿ ಶಿವಾಚಾರ್ಯರು, ರೇಣುಕ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪಂಚಾಕ್ಷರ ಶಿವಾಚಾರ್ಯರ ಕ್ರಿಯಾ ಸಮಾಧಿಯು ರಾಜೂರು ಗ್ರಾಮದಲ್ಲಿ ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನದಂತೆ ನೆರವೇರಿತು.