

ಪಾ.ಶ್ರೀ.ಅನಂತರಾಮ್ ಕೋಲಾರ
ಜಿಲ್ಲಾ ಕೇಂದ್ರವಾದ ಕೋಲಾರ ನಗರ ಸಿಲಿಕಾನ್ ಸಿಟಿಗೆ ಸಮೀಪದಲ್ಲಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಾಗರಿಕರ ಇಚ್ಛಾಶಕ್ತಿಯ ಕೊರತೆಯಿಂದ ಅಡ್ಡಾದಿಡ್ಡಿಯಾಗಿ ಬೆಳೆದಿದ್ದು, ಹೋಬಳಿ ಕೇಂದ್ರಕ್ಕಿಂತ ಅಧ್ವಾನವಾಗಿದೆ, ಸರ್ಕಾರದ ಮೇಲೆ ಒತ್ತಡ ತಂದು ಅಭಿವೃದ್ಧಿಗೆ ಕಾಯಕಲ್ಪ ನೀಡುವುದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಸಾರಥ್ಯ ವಹಿಸಿರುವವರ ಜವಾಬ್ದಾರಿಯಾಗಿದೆ.
1988ರಲ್ಲಿ ಸ್ಥಾಪಿತವಾದ ಪ್ರಾಧಿಕಾರದಿಂದ ಟಮಕದಲ್ಲಿ ದೇವರಾಜ ಅರಸು ಬಡಾವಣೆ ರಚನೆಯಾಗಿರುವುದು ಹೊರತುಪಡಿಸಿದರೆ 32 ವರ್ಷಗಳಲ್ಲಿ ನೆನಪಿನಲ್ಲಿ ಉಳಿಯಬಹುದಾದ ಒಂದೇ ಒಂದು ಶಾಶ್ವತ ಅಭಿವೃದ್ಧಿ ನಡೆದಿಲ್ಲ.
ಪ್ರಾಧಿಕಾರ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಗಂಜಿ ಕೇಂದ್ರವಾಗಿದೆಯೇ ಹೊರತು ಹೊಸ ಆಯಾಮ ಸೃಷ್ಟಿಸುವ ಶಕ್ತಿ ಪಡೆದುಕೊಂಡಿಲ್ಲ, ಒಂದು ವೇಳೆ ಪ್ರಾಧಿಕಾರ ಸದೃಢವಾಗಿದ್ದರೆ ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮಾದರಿ ಆಗಬಹುದಿತ್ತು.
ಪ್ರಾಧಿಕಾರಕ್ಕೆ ಅನೇಕರು ಅಧ್ಯಕ್ಷರಾಗಿದ್ದಾರೆ, ಸಿಬ್ಬಂದಿ ಕೊರತೆ ನಿವಾರಿಸಲಾಗಿಲ್ಲ, ಅರಸು ಬಡಾವಣೆಗೆ ಅಗತ್ಯ ಸವಲತ್ತು ಕಲ್ಪಿಸಲು ಆರ್ಥಿಕ ಶಕ್ತಿ ಪಡೆದುಕೊಂಡಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಕೈಗೊಳ್ಳಬೇಕಾದ ಯೋಜನೆಗಳಿಗೆ ದೂರದೃಷ್ಟಿಯುಳ್ಳ ನೀಲಿನಕ್ಷೆ ಸಿದ್ಧಪಡಿಸಿ ಕಾಲ ಮಿತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ.
ಪ್ರಾಧಿಕಾರದ ವೈಫಲ್ಯಕ್ಕೆ ಕಾರಣವೇನು ಎಂಬುದನ್ನು ನೂತನ ಅಧ್ಯಕ್ಷ ಓಂಶಕ್ತಿ ಚಲಪತಿ ಮತ್ತವರ ತಂಡ ಪತ್ತೆ ಮಾಡಿ ಪ್ರಗತಿಪರ ಯೋಜನೆ ಜಾರಿಗೆ ಬದ್ಧತೆ ತೋರುವ ಮೂಲಕ ಹೊಸ ಮನ್ವಂತರದ ಕಡೆ ಸಾಗದಿದ್ದರೆ ಪ್ರಾಧಿಕಾರ ಇದ್ದೂ ಇಲ್ಲದಂತಾಗುತ್ತದೆ. ಕೂಡಾ ವ್ಯಾಪ್ತಿಗೆ ಸೇರಿದ ಅನೇಕ ಖಾಸಗಿ ಬಡಾವಣೆಗಳು ಗ್ರಾಪಂಗಳಲ್ಲಿ ಖಾತೆ ಮಾಡಿಸಿಕೊಂಡು ಮೂಲ ಸೌಕರ್ಯಗಳನ್ನು ಪ್ರಾಧಿಕಾರದಿಂದ ಬಯಸುತ್ತಿದ್ದು ಇದಕ್ಕೆ ತೆರೆ ಎಳೆದು ತೆರಿಗೆ ಸಂಗ್ರಹಣೆಯ ಹಕ್ಕಿನೊಂದಿಗೆ ಅಭಿವೃದ್ಧಿ ಕಾರ್ಯಗಳ ವಿಸ್ತರಣೆಗೆ ಗಮನ ಹರಿಸಬೇಕೆಂಬುದು ಅನೇಕರ ವಾದ.
ಖಾಸಗಿ ಬಡಾವಣೆಗಳಲ್ಲಿ ಶೇ.60 ನಿವೇಶನಗಳಿಗೆ ಖಾತೆಯಾಗಿದ್ದು ಉಳಿದ ಶೇ.40 ನಿವೇಶನಗಳನ್ನು ಖಾತೆ ಇಲ್ಲದೆ ವಿಲೇವಾರಿ ಮಾಡಲಾಗಿದೆ, ಗ್ರಾಪಂನಿಂದ ಬಡಾವಣೆಗೆ ಸಂಬಂಧಿಸಿದ ದಾಖಲೆ ಪತ್ರ ವಶಕ್ಕೆ ಪಡೆಯುವಲ್ಲೂ ಪ್ರಾಧಿಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿಲ್ಲ, ಸರ್ಕಾರ ಪ್ರಾಧಿಕಾರ ಮತ್ತು ಗ್ರಾಪಂ ವ್ಯಾಪ್ತಿಗೆ ಇರುವ ಅಧಿಕಾರ ಮತ್ತು ಆಸ್ತಿಗಳ ನಿರ್ವಹಣೆಗೆ ಮಾರ್ಗಸೂಚಿ ಹೊರಡಿಸದಿದ್ದರೆ ಪ್ರಾಧಿಕಾರದ ಸಿಬ್ಬಂದಿಗೆ ವೇತನ ನೀಡುವುದಕ್ಕೂ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಪ್ರಾಧಿಕಾರದಲ್ಲಿ ಅಗತ್ಯ ಸಿಬ್ಬಂದಿ ಇಲ್ಲದೆ ತೆರಿಗೆ ಸಂಗ್ರಹಣೆ ಕುಂಠಿತಗೊಂಡಿದೆ, ಅನಧಿಕೃತ ಕಟ್ಟಡಗಳ ಮೇಲೆ ನಿಗಾ ವಹಿಸಲು ಜಾಗೃತದಳ ರಚನೆಗೆ ಕಷ್ಟವಾಗಿದೆ, ಹೊಸ ಬಡಾವಣೆ ರಚನೆಗೆ ಭೂಮಿ ಖರೀದಿಸುವುದು ದುಸ್ತರವಾಗಿದೆ, ಹೊರ ವರ್ತುಲ ರಸ್ತೆ ನಿರ್ಮಾಣದ ಕನಸು ಕನಸಾಗೇ ಉಳಿದಿದೆ, ಉದ್ಯಾನವನಗಳು ಅಭಿವೃದ್ಧಿ ಕಾಣದೆ ಸೊರಗಿವೆ, ಅರಸು ಬಡಾವಣೆಯಲ್ಲಿ ಕೊರೆದಿರುವ ಕೊಳವೆ ಬಾವಿಗಳು ನಿಷ್ಕ್ರಿಯಗೊಂಡಿದ್ದು ಟ್ಯಾಂಕರ್ ನೀರು ಸರಬರಾಜು ಮಾಡುವ ಮೂಲಕ ಆರ್ಥಿಕ ಹೊರೆ ಹೆಚ್ಚಿಸಿಕೊಳ್ಳುತ್ತಿದೆ.
ಕಾಂಗ್ರೆಸ್ ಆಳ್ವಿಕೆಯಲ್ಲಿ ಹೊರ ವರ್ತುಲ ರಸ್ತೆಯ ಮೊದಲ ಹಂತದ ಕಾಮಗಾರಿಗೆ 110 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದರೂ ಬಿಡಿಗಾಸೂ ಅನುದಾನ ಬಿಡುಗಡೆಯಾಗಿಲ್ಲ, ಮಾಲೂರು ರಸ್ತೆಯಿಂದ ಚಿಂತಾಮಣಿ ರಸ್ತೆವರೆಗೆ ಅಭಿವೃದ್ಧಿಪಡಿಸುವ ಈ ಯೋಜನೆಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರಿಂದ ಲಾಬಿ ಮಾಡಿಸಿ ಆದಷ್ಟು ಬೇಗನೆ ಕಾಮಗಾರಿಗೆ ಚಾಲನೆ ಕೊಡಿಸಿದರೆ ಪ್ರಾಧಿಕಾರದ ಮೇಲೆ ಜನರಿಗೆ ಒಂದಿಷ್ಟು ನಂಬಿಕೆ ಬರುತ್ತದೆ.
ಕಾಯಕಲ್ಪಕ್ಕೆ ಮುನ್ನುಡಿ: ಬೈರತಿ ಬಸವರಾಜು ಪ್ರಗತಿ ಪರಿಶೀಲನೆಗಾಗಿ ಆ.26ರಂದು ಕೋಲಾರಕ್ಕೆ ಬರುತ್ತಿದ್ದು ಓಂಶಕ್ತಿ ಚಲಪತಿ ನಗರದ ಹಿತ ಬಯಸುವ ವಿವಿಧ ಸ್ತರಗಳ ಜನರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆದು ಸಚಿವರಿಗೆ ಮನವಿ ಸಲ್ಲಿಸಿ ಅನುಮೋದನೆ ಪಡೆಯಬೇಕು. ಈ ಮೂಲಕ ಕಾಯಕಲ್ಪಕ್ಕೆ ಮುನ್ನುಡಿ ಬರೆದು ಅಭಿವೃದ್ಧಿಗೆ ಬೇಗನೆ ಚಾಲನೆ ಸಿಗುವಂತೆ ಮಾಡಿದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಪ್ರಾಧಿಕಾರ ಗಂಜಿ ಕೇಂದ್ರ ಎಂಬ ಅಪವಾದ ತಪ್ಪುತ್ತದೆ.
ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ನನ್ನ ಸೌಭಾಗ್ಯ, ಸಂಸದ ಎಸ್.ಮುನಿಸ್ವಾಮಿ ಮತ್ತು ನಮ್ಮ ಪಕ್ಷದ ನಾಯಕ ಸಹಕಾರ, ಸಲಹೆ ಪಡೆದು ಸರ್ಕಾರದಿಂದ ಅಗತ್ಯ ನೆರವು ಪಡೆದು ಕೋಲಾರ ನಗರ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ, ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ನೆರವು ಕೋರಿ ಬೈರತಿ ಬಸವರಾಜು ಅವರಿಗೆ ಮನವಿ ಸಲ್ಲಿಸಲಾಗುವುದು, ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಓಂಶಕ್ತಿ ಚಲಪತಿ, ಅಧ್ಯಕ್ಷ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ