

ಹನೂರು: ಅನುಮತಿಯಿಲ್ಲದೆ ಕೆಲವರು ತಮಿಳುನಾಡಿನಿಂದ ಅಡ್ಡದಾರಿ ಮೂಲಕ ಹನೂರು ಭಾಗಕ್ಕೆ ಆಗಮಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.
ಸಮೀಪದ ಆರ್.ಎಸ್ ದೊಡ್ಡಿ ಬಳಿಯಿರುವ ಮುರಾರ್ಜಿ ದೇಸಾಯಿ ಮಾದರಿ ವಸತಿ ಕಾಲೇಜಿನಲ್ಲಿ ತೆರೆದಿರುವ ಕ್ವಾರಂಟೈನ್ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಇನ್ನಿತರೆ ರಾಜ್ಯಗಳಿಂದ ಕೆಲವರು ಅನುಮತಿಯಲ್ಲದೆ ಜಿಲ್ಲೆಗೆ ಆಗಮಿಸಿದ್ದು, ಕ್ವಾರಂಟೈನ್ ಕೇಂದ್ರದಲ್ಲಿದ್ದಾರೆ. ಹಾಗಾಗಿ ಇವರೆಲ್ಲರ ಗಂಟಲು ದ್ರವ ಪರೀಕ್ಷೆ ನಡೆಸಿ ನೆಗೆಟಿವ್ ದೃಢಪಟ್ಟ ಬಳಿಕ 7 ದಿನದ ನಂತರ ಅವರ ಮನೆಗಳಿಗೆ ಕಳುಹಿಸಿಕೊಡಬೇಕು. 14 ದಿನಗಳು ಕಾಯುವ ಅಗತ್ಯವಿಲ್ಲ ಎಂದರು.
ಕ್ವಾರಂಟೈನ್‌ನಲ್ಲಿ ಇರುವವರಿಗೆ ನೀಡುವ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು. ಇದರಲ್ಲಿ ನಿರ್ಲಕ್ಷ್ಯ ಸಲ್ಲದು. ನಿಗದಿತ ಸಮಯಕ್ಕೆ ಊಟ, ತಿಂಡಿ ನೀಡುವುದರ ಮೂಲಕ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು. ಶುದ್ಧವಾದ ಕುಡಿಯುವ ನೀರನ್ನು ನೀಡಬೇಕು. ಸ್ವಚ್ಛತೆಗೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಶೌಚಗೃಹವನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ ಕ್ವಾರಂಟೈನ್‌ನಲ್ಲಿದ್ದ ತಮಿಳುನಾಡು ಹಾಗೂ ಆಂಧ್ರಪ್ರದೇಶದವರನ್ನು ಭೇಟಿ ಮಾಡಿ ನೀವು ಅನುಮತಿಯಿಲ್ಲದೆ ಯಾವ ರೀತಿ ಹನೂರು ಭಾಗಕ್ಕೆ ಪ್ರವೇಶಿಸಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ಅಡ್ಡದಾರಿಯ ಮೂಲಕ ಆಗಮಿಸಿರುವುದಾಗಿ ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿಗಳು ನೀವು ಮಾಡಿರುವುದು ತಪ್ಪು ಎಂದು ಬುದ್ಧಿವಾದ ಹೇಳಿದರಲ್ಲದೇ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿ ನೀಡುವ ಊಟ ಉಪಚಾರದ ಬಗ್ಗೆ ಮಾಹಿತಿ ಪಡೆದರು.
ನಮ್ಮನ್ನು ಬಿಡುಗಡೆಗೊಳಿಸಿ: ಕ್ವಾರಂಟೈನ್ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ವೇಳೆ ರಾಮಾಪುರ ಭಾಗದ ಇಬ್ಬರು ಮಹಿಳೆಯರು ಮಾತನಾಡಿ, ನಮ್ಮ ಸಂಬಂಧಿಕರೊಬ್ಬರು ತಮಿಳುನಾಡಿನಲ್ಲಿ ಮೃತಪಟ್ಟಿದ್ದರು. ಈ ಹಿನ್ನ್ನೆಲೆ ಶನಿವಾರ ಉಪ ವಿಭಾಗಾಧಿಕಾರಿಗಳಿಂದ ಅನುಮತಿ ಪತ್ರ ಪಡೆದು ಕಾರಿನಲ್ಲಿ ತಮಿಳುನಾಡಿಗೆ ತೆರಳಿ ಅಂದೇ ಗ್ರಾಮಕ್ಕೆ ವಾಪಾಸ್ಸಾಗಿದ್ದೆವು. ಆದರೆ ದಿಢೀರನೇ ನಮ್ಮನ್ನು ಕರೆದುಕೊಂಡು ಬಂದು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿದ್ದಾರೆ. ನಮ್ಮ ಮನೆಯಲ್ಲಿ ಮಕ್ಕಳಿದ್ದು, ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ದಯವಿಟ್ಟು ನಮ್ಮನ್ನು ಮನೆಗೆ ಕಳುಹಿಸಿಕೊಡುವಂತೆ ಪರಿಪರಿಯಾಗಿ ಬೇಡಿಕೊಂಡರು. ಈ ವೇಳೆ ಜಿಲ್ಲಾಧಿಕಾರಿಗಳು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿ ಅಗತ್ಯ ಮಾಹಿತಿ ಪಡೆದು ಮನೆಗೆ ಕಳುಹಿಸಿಕೊಡುವಂತೆ ಎಸಿ ನಿಖಿತಾ ಚಿನ್ನಸ್ವಾಮಿ ಅವರಿಗೆ ಸೂಚಿಸಿದರು.
ಡಿಎಚ್‌ಒ ಎಂ.ಸಿ ರವಿ, ತಹಸೀಲ್ದಾರ್ ಬಸವರಾಜು ಚಿಗರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ನೋಡಲ್ ಅಧಿಕಾರಿ ಬಿಇಒ ಟಿ.ಆರ್ ಸ್ವಾಮಿ, ಡಿವೈಎಸ್ಪಿ ನವೀನ್‌ಕುಮಾರ್, ಪ್ರಾಂಶುಪಾಲ ಯೋಗೇಶ್ ಹಾಗೂ ಇನ್ನಿತರರಿದ್ದರು.