ಅಡೆತಡೆ ಸಮರ್ಥವಾಗಿ ಎದುರಿಸಿ

psi santosh sanman
Published on

ಬೀದರ್: ಜೀವನದಲ್ಲಿ ಬರುವ ಎಲ್ಲ ಅಡೆತಡೆ ಸಮರ್ಥ ಎದುರಿಸಿ ಮುಂದೆ ಸಾಗಿದವರು ಏನಾದರೂ ಸಾಧನೆ ಮಾಡಬಲ್ಲರು. ಕಷ್ಟ ಮತ್ತು ಸುಖಗಳನ್ನು ಸಮಾನ ಸ್ವೀಕರಿಸಿ ಮುನ್ನಡೆದಾಗ ಸಾಧನೆ ಸಿಗುತ್ತದೆ ಡಿವೈಎಸ್ಪಿ ಬಸವೇಶ್ವರ ಹೀರಾ ಹೇಳಿದರು.

ನೌಬಾದ್ ನ ಚೌಳಿ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದಲ್ಲಿ ಭಾನುವಾರ ನಿವೇದಿತಾ ಹೂಗಾರ ಪ್ರತಿಷ್ಠಾನದಿಂದ ಆಯೋಜಿಸಿದ ಶ್ರೀದೇವಿ ಹೂಗಾರ ರಚಿತ ಚುಕ್ಕಿ…? ಭಾಗ-1 ಪುಸ್ತಕ ಲೋಕಾರ್ಪಣೆ ಹಾಗೂ ಸಾಧಕರ ಸನ್ಮಾನ ಉದ್ಘಾಟಿಸಿ, ಸಾಧನೆ ಮಾಡಲು ಛಲ ಬೇಕು. ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದಾಗ ಯಶಸ್ಸು ಲಭಿಸುತ್ತದೆ ಎಂದರು.

ಉಪನ್ಯಾಸ ನೀಡಿದ ಡಾ.ಮಹೇಶ್ವರಿ ಹೇಡೆ, ಚುಕ್ಕಿ ಪುಸ್ತಕ ಅಪರೂಪದ ಭಾವನಾತ್ಮಕ, ಮೌಲಿಕ ಕೃತಿಯಾಗಿದೆ. ಇದರಲ್ಲಿ ಕೌಟುಂಬಿಕ ಜವಾಬ್ದಾರಿ, ಸಂಬಂಧಗಳ ಮಹತ್ವ, ಸಾಮಾಜಿಕ ಚಿಂತನೆ, ಅಧ್ಯಾತ್ಮಿಕ ನಿಲುವುಗಳ ಕುರಿತು ಹೂಗಾರ ಅವರು ಹೃದಯಸ್ಪರ್ಶಿಯಾಗಿ ಬರೆದಿದ್ದಾರೆ ಎಂದರು.

ಲೇಖಕಿ ಶ್ರೀದೇವಿ ಹೂಗಾರ ಮಾತನಾಡಿ, ಕರುಳಿನ ಕುಡಿ ಬೆರಳು ಹಿಡಿದು ನಡೆಯುತ್ತ ಒಮ್ಮೆಲೆ ವಿಧಿಗೆ ತುತ್ತಾದ ಕರುಣಾಜನಕ ಕಥೆ ಬರಹಕ್ಕೆ ಇಳಿಸುವಾಗ ನೊಂದ ಮನಸ್ಸಿನ ನೋವು ಹೇಳತೀರದು. ಪ್ರತಿಯೊಬ್ಬರ ಜೀವನದಲ್ಲಿ ಸಹ ಕಷ್ಟ, ಕಣ್ಣೀರು ರುತ್ತದೆ. ಅದನ್ನೆಲ್ಲವೂ ಬದಿಗೊತ್ತಿ ಸಾಧಿಸುವ ಛಲ ಇರಬೇಕು ಎಂದು ಭಾವುಕರಾಗಿ ನುಡಿದರು.

ಹುಮನಾಬಾದ್ ಬಿಪಿಟಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಹಣಮಂತ ಭರಶೆಟ್ಟಿ ಮಾತನಾಡಿದರು. ಸಾನ್ನಿಧ್ಯ ಬಿ.ಕೆ.ಜ್ಯೋತಿ ಬಹೆನ್ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿಪಿಐ ಡಿ.ಜಿ.ರಾಜಣ್ಣ, ಪಿಎಸ್ಐ ಸಂತೋಷ ತಟ್ಟೆಪಲ್ಲಿ, ಸುವರ್ಣಾ, ಸಾಹಿತಿ ಡಾ. ಎಂ.ಜಿ.ದೇಶಪಾಂಡೆ, ಡಾ.ಸಿ.ಆನಂದರಾವ, ಅರವಿಂದ ಕುಲಕರ್ಣಿ, ವೀರಭದ್ರಪ್ಪ ಉಪ್ಪಿನ್, ಓಂಕಾರ ಪಾಟೀಲ್, ಬಸವರಾಜ ಮುಗಳಿ, ಡಾ.ಜಗದೇವಿ ತಿಬಶೆಟ್ಟಿ, ಡಾ.ನಿಜಲಿಂಗ ರಗಟೆ ಸನ್ಮಾನಿಸಲಾಯಿತು. ಸಂಗಮೇಶ್ವರ ಜಾಂತೆ ಸ್ವಾಗತಿಸಿದರು. ಬಿ.ಕೆ.ರೇಣುಕಾ ಬಹೆನ್ ನಿರೂಪಣೆ ಮಾಡಿದರು. ಡಾ.ಶ್ರೇಯಾ ಮಹೇಂದ್ರಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net