

*ಭಾರತ್ ಗ್ಯಾಸ್ ವಿತರಕ ಮಹೇಶ್ ಕುದರ್ ಸಲಹೆ
*ನಮ್ಮ ಅಡುಗೆ ನಮ್ಮ ಜವಾಬ್ದಾರಿ ಅಡುಗೆ ಸ್ಪರ್ಧೆ
ಚಾಮರಾಜನಗರ: ಪ್ರತಿಯೊಬ್ಬರು ಅಡುಗೆ ಇಂಧನ ಬಳಕೆಯ ಕುರಿತು ಜಾಗೃತಿ ವಹಿಸುವುದು ಅತ್ಯಗತ್ಯವಾಗಿದೆ ಎಂದು ಭಾರತ್ ಗ್ಯಾಸ್ ವಿತರಕ ಹಾಗೂ ಕಾಂಗ್ರೆಸ್ ಯುವ ಮುಖಂಡ ಮಹೇಶ್ ಕುದರ್ ಸಲಹೆ ನೀಡಿದರು.
ನಗರದ ವರ್ತಕರ ಭವನದಲ್ಲಿ ಆಯಿಲ್ ಕಂಪನಿಗಳ ವತಿಯಿಂದ ಭಾನುವಾರ ಆಯೋಜಿಸಿದ್ದ ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಅಡುಗೆ ನಮ್ಮ ಜವಾಬ್ದಾರಿ ಘೋಷಣೆಯೊಂದಿಗೆ ಎಲ್ಲಾ ಗ್ಯಾಸ್ ಕಂಪನಿಗಳ ಸಹಯೋಗದಲ್ಲಿ ಬಹಳ ಅಚ್ಚುಕಟ್ಟಾಗಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಗ್ಯಾಸ್ ಬಳಕೆ ಬಗ್ಗೆ ಅರಿವು ಮೂಡಿಸುವ ಜತೆಗೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಬಿಪಿಸಿಎಲ್ ಸೇಲ್ ಅಫೀಸರ್ ನೀತಿನ್ ಥಾಮಸ್ ಮಾತನಾಡಿ, ಅಡುಗೆ ಸ್ಪರ್ಧೆ ಎಲ್‌ಪಿಜಿ ಅಡುಗೆ ಸುರಕ್ಷತೆಯ ಭಾಗವಾಗಿದೆ. ನಿಮ್ಮ ಅಡುಗೆಯ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ನೀವೆ ತೆಗೆದುಕೊಳ್ಳಬೇಕು. ಉತ್ತಮ ಆರೋಗ್ಯದ ಜತೆಗೆ ಗ್ಯಾಸ್ ಬಳಕೆ ಸುರಕ್ಷತೆಯನ್ನು ತಿಳಿಸಲಾಗುತ್ತದೆ. ಅಡುಗೆ ನಂತರ ಗ್ಯಾಸ್ ಸಿಲೆಂಡರ್ ರೆಗ್ಯೂಲೇಟರ್ ಅಫ್ ಮಾಡಬೇಕು. ನಮ್ಮ ಆರೋಗ್ಯವು ಸಹ ನಾವು ತಯಾರು ಮಾಡುವ ಅಡುಗೆಯಲ್ಲಿ ಇರುತ್ತದೆ ಎಂದರು.
ತೀರ್ಪುಗಾರರಾಗಿ ಶ್ರೀಬಸವರಾಜೇಂದ್ರ ಆಸ್ಪತ್ರೆಯ ಡಾ.ಶ್ವೇತಾ, ಮುಖ್ಯ ಶಿಕ್ಷಕ ಸುನೀತಾ, ಜಿಆರ್ ಗ್ರೂಫ್‌ನ ಕಮಲ, ಹಿಡನ್ ಸ್ಪೇಸ್‌ನ ಅಭಿ ಭಾಗಹಿಸಿದ್ದರು.
ಅಡುಗೆ ಸ್ಪರ್ಧೆಯಲ್ಲಿ ಮುತ್ತುರಾಜ್ ಪ್ರಥಮ:
ಹನೂರು ನಂದಾ ಭಾರತ್ ಗ್ಯಾಸ್‌ನ ಮುತ್ತುರಾಜ್ ಅಡುಗೆ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಯಳಂದೂರಿನ ಗೋಪಾಲಸ್ವಾಮಿ ಎಚ್‌ಪಿ ಗ್ಯಾಸ್‌ನ ಶಶಿಕಲಾ ದ್ವೀತಿಯ ಸ್ಥಾನವನ್ನು ಪಡೆದುಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸಿದ 17 ಜನರಿಗೂ ಸಹ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಜಿಲ್ಲೆಯ ವ್ಯಾಪ್ತಿಯ ಎಲ್ಲಾ ಭಾಗಗಳಿಂದ ಸ್ಪರ್ಧೆಗಳು ಭಾಗವಹಿಸಿದ್ದರು. ವಿವಿಧ ಬಗೆಯ ಅಡುಗೆಗಳನ್ನು ತಯಾರು ಮಾಡುವ ಮೂಲಕ ಗ್ಯಾಸ್ ಬಳಕೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳು ಹಾಗೂ ಸುರಕ್ಷತೆ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಲಾಯಿತು.