

ರಾಮನಗರ: ಜಿಲ್ಲೆಯ ನಗರ ಪ್ರದೇಶಗಳಲ್ಲಿ ಪೈಪ್‌ಲೈನ್ ಮೂಲಕ ಪ್ರತಿ ಮನೆಗೆ ಅಡುಗೆ ಅನಿಲ ಪೂರೈಕೆಗಾಗಿ ಮನೆಗಳ ಸಮೀಕ್ಷೆ ಕಾರ್ಯ ಆರಂಭವಾಗಿದೆ.
ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಎಂಎನ್‌ಜಿಎಲ್ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಪ್ರತಿ ಮನೆಗೆ ತೆರಳಿ ಪೈಪ್‌ಲೈನ್ ಅಡುಗೆ ಸಂಪರ್ಕ ಹೊಂದುವಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ. ಈ ಯೋಜನೆ ಒಪ್ಪಿದವರ ಮನೆಗಳಿಗೆ ಅನಿಲ ಸಂಪರ್ಕದ ಪೈಪ್‌ಗಳನ್ನು ಅಳವಡಿಸುವ ಕಾರ್ಯ ಸಹ ನಡೆದಿದೆ.
ದೇಶದ 150ಕ್ಕೂ ಹೆಚ್ಚು ನಗರಗಳಲ್ಲಿ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಕರ್ನಾಟಕದಲ್ಲೂ ಬೆಂಗಳೂರು, ಮೈಸೂರು, ಮಂಗಳೂರು ಸೇರಿ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬರುತ್ತಿದೆ. ರಾಮನಗರದಲ್ಲಿ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಯೋಜನೆಯನ್ನು ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ (ಎಂಎನ್‌ಜಿಎಲ್) ಕಂಪನಿ ಅನುಷ್ಠಾನ ಮಾಡುತ್ತಿದೆ.
ರಾಮನಗರ ಜಿಲ್ಲೆಯಲ್ಲಿ ಎಂಎನ್‌ಜಿಎಲ್ ಮುಂದಿನ ಆರೇಳು ವರ್ಷದಲ್ಲಿ ಒಟ್ಟು 1.13 ಲಕ್ಷ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ 300 ಕಿ.ಮೀ. ಉದ್ದದ ಪೈಪ್‌ಲೈನ್ ಹಾಕಲು ಯೋಜಿಸಲಾಗಿದ್ದು, 37 ಸಿಎನ್‌ಜಿ ಕೇಂದ್ರಗಳನ್ನೂ ತೆರೆಯಲಿದೆ. ಬೃಹತ್ ಕೊಳವೆ ಮಾರ್ಗಗಳ ಮೂಲಕ ನಗರ ಪ್ರದೇಶಗಳಿಗೆ ಅಡುಗೆ ಅನಿಲವನ್ನು ತರಲಾಗುತ್ತದೆ. ನಗರದಲ್ಲಿ ಉಪ ಕೇಂದ್ರಗಳನ್ನು ಸ್ಥಾಪಿಸಿ, ಅಲ್ಲಿಂದ ಮನೆಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಸರಬರಾಜಾಗಲಿದೆ. ನೇರವಾಗಿ ಅಡುಗೆಮನೆಗೇ ಸಂಪರ್ಕ ಸಿಗಲಿದೆ.
ಪ್ರತ್ಯೇಕ ಮೀಟರ್: ನೀರಿನ ಪೂರೈಕೆಗೆ ಮೀಟರ್ ಅಳವಡಿಕೆ ಮಾಡುವಂತೆ ಗ್ಯಾಸ್ ಪೂರೈಕೆಗೂ ಪ್ರತಿ ಮನೆಗೂ ಪ್ರತ್ಯೇಕ ಮೀಟರ್ ಅಳವಡಿಸಲಾಗುತ್ತದೆ. ಸರಬರಾಜು ಮತ್ತು ಬಳಕೆ ಆಧರಿಸಿ ಶುಲ್ಕ ಪಾವತಿಸಬೇಕು. ಆದರೆ, ಸದ್ಯ ಈ ಸಂಪರ್ಕ ಪಡೆಯುವುದು ಕಡ್ಡಾಯವೇನಲ್ಲ. ಯೋಜನೆ ಜಾರಿಗೆ ಬರಲು ಇನ್ನೂ ಹಲವು ವರ್ಷಗಳು ಬೇಕು. ಆ ನಂತರವೂ ಪೈಪ್‌ಲೈನ್ ಜತೆಗೆ ಸಿಲಿಂಡರ್ ಆಯ್ಕೆಯೂ ಇರುತ್ತದೆ. ಗ್ರಾಹಕರು ತಮಗೆ ಅನುಕೂಲ ಆಗುವುದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಇರಲಿದೆ.
ರಾಮನಗರದಲ್ಲಿ ಮನೆ ಮನೆಗೆ ಅಡುಗೆ ಅನಿಲ ಪೂರೈಕೆ ಮಾಡುವ ಸಂಬಂಧ ಎಂಎನ್‌ಜಿಎಲ್ ಕಂಪನಿಯು ಮಾರುಕಟ್ಟೆ ಸಮೀಕ್ಷೆ ನಡೆಸುತ್ತಿದೆ. ಸಂಸ್ಥೆ ವರದಿ ಸಲ್ಲಿಕೆ ಮಾಡಿದ ನಂತರವಷ್ಟೇ ರಸ್ತೆ ಅಗೆತಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗುವುದು. ನಂದಕುಮಾರ್, ಪೌರಾಯುಕ್ತ, ರಾಮನಗರ ನಗರಸಭೆ