

ಮೈಸೂರು: ಗೃಹ ಬಳಕೆಯ ಅಡುಗೆ ಅನಿಲ ದರವನ್ನು ಮತ್ತೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಮಾ.1ರಿಂದ ಜಾರಿಗೆ ಬರುವಂತೆ ಗೃಹ ಬಳಕೆಯ ಸಿಲಿಂಡರಿಗೆ 50 ರೂ. ಮತ್ತು ವಾಣಿಜ್ಯ ಬಳಕೆಯ ಸಿಲಿಂಡರಿಗೆ 350 ರೂ. ಏರಿಕೆ ಮಾಡಲಾಗಿದೆ. ಈಗಾಗಲೇ ಆಹಾರ ಪದಾರ್ಥಗಳು, ವಿದ್ಯುತ್, ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದಾರೆ. ಕೋವಿಡ್ ಕಾರಣದಿಂದ 2020ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ ಬೆಲೆ ಕಡಿಮೆಯಾಗಿ ರಿಯಾಯಿತಿ ದರ ಮತ್ತು ಮಾರುಕಟ್ಟೆ ದರ ಒಂದೇ ಆಗಿತ್ತು. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರವು ಗ್ರಾಹಕರ ಬ್ಯಾಂಕ್ ಖಾತೆಗೆ ಸಬ್ಸಿಡಿ ಮೊತ್ತ ವರ್ಗಾವಣೆ ಮಾಡುವುದನ್ನು ನಿಲ್ಲಿಸಿತು ಎಂದು ಕಿಡಿಕಾರಿದರು.
2012-13ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಗ್ಯಾಸ್ ಮತ್ತು ಸೀಮೆಎಣ್ಣೆ ಸೇರಿದಂತೆ 97 ಸಾವಿರ ಕೋಟಿ ರೂ. ಸಬ್ಸಿಡಿ ನೀಡಿದ್ದು, ಈ ವರ್ಷದ ಬಜೆಟ್‌ನಲ್ಲಿ ಇದು 2,257 ಕೋಟಿ ರೂ.ಗೆ ಇಳಿದಿದೆ. 9.5 ಕೋಟಿ ಬಡ ಕುಟುಂಬಗಳಿಗೆ ಉಜ್ವಲ ಯೋಜನೆಯಲ್ಲಿ ಅನಿಲ ಸಂಪರ್ಕ ನೀಡಲಾಗಿದೆಯೆಂದು ಹೇಳುವ ನರೇಂದ್ರ ಮೋದಿ ಸರ್ಕಾರ ಅದೇ ಕಾರಣಕ್ಕೆ ಸೀಮೆಎಣ್ಣೆ ವಿತರಿಸುವುದನ್ನೂ ನಿಲ್ಲಿಸಿದೆ. ಸರ್ಕಾರ ಭಾರಿ ಪ್ರಚಾರ ನೀಡುತ್ತಿರುವ ಈ ಯೋಜನೆಯ ಫಲಾನುಭವಿಗಳಿಗೂ 200 ರೂ. ಮಾತ್ರ ಸಬ್ಸಿಡಿ ನೀಡಲಾಗುತ್ತಿದೆ. ಬಡವರು ಮತ್ತು ಗ್ರಾಮೀಣ ಕೂಲಿಕಾರರು ಮತ್ತೆ ಸೌದೆ ಬಳಸುವ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ತಕ್ಷಣ ಗೃಹ ಬಳಕೆಯ ಅಡುಗೆ ಅನಿಲದ ದರ, ಅಗತ್ಯ ವಸ್ತುಗಳ ಬೆಲೆ, ಪೆಟ್ರೋಲ್ ದರವನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು
ಎಸ್‌ಯುಸಿಐಸಿ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಸದಸ್ಯರಾದ ಎಂ. ಉಮಾದೇವಿ, ಜಿ.ಎಸ್. ಸೀಮಾ, ಪಿ.ಎಸ್. ಸಂಧ್ಯಾ, ಟಿ.ಆರ್. ಸುನಿಲ್, ಸುಮಾ, ಚಂದ್ರಕಲಾ, ಆಸಿಯಾ ಬೇಗಂ, ಬಸವರಾಜು, ನೀತುಶ್ರೀ, ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್, ಉಪಾಧ್ಯಕ್ಷ ಕೆ.ವಿ.ಭಟ್ ಇತರರು ಇದ್ದರು.