ಅಡುಗೆ ಅನಿಲ ದರ ಇಳಿಕೆಗೆ ಆಗ್ರಹ

17 vikram 4
Published on

ಧಾರವಾಡ: ಅಡುಗೆ ಅನಿಲ ದರ ಇಳಿಸುವಂತೆ ಆಗ್ರಹಿಸಿ ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಡಿಸಿ ಕಚೇರಿ ಎದುರೇ ಒಲೆ ಹೂಡಿ, ಉಪ್ಪಿಟ್ಟು-ಚಹಾ ತಯಾರಿಸುವ ಮೂಲಕ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಕೋವಿಡ್​ನಿಂದ ಜನರು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ. ಇದರ ಮಧ್ಯೆ ಸಿಲಿಂಡರ್ ದರ ಏರಿಸಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ 410ರೂ.ಗೆ ಇದ್ದ ಸಿಲಿಂಡರ್ ಬೆಲೆ ಈಗ 772 ರೂ. ಆಗಿದೆ. ಸಾಮಾನ್ಯ ಜನರ ಹಿತದೃಷ್ಟಿಯಿಂದ ಕೂಡಲೆ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಪದೇ ಪದೆ ಏರುತ್ತಿರುವ ಸಿಲಿಂಡರ್ ದರ ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರೂ ಕೇಂದ್ರ ಸರ್ಕಾರ ಮಾತ್ರ ನಿದ್ರೆಯಲ್ಲಿ ಇದ್ದಂತೆ ಕಾಣುತ್ತಿದೆ. ಕೂಡಲೆ ದರ ಇಳಿಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿಪತ್ರ ರವಾನಿಸಿದರು. ಸಮಿತಿ ಅಧ್ಯಕ್ಷೆ ದೀಪಾ ಗೌರಿ, ಜಯಶ್ರೀ ದೇಶಮಾನ್ಯ, ಸಾವಿತ್ರಿ ಜೈನ್, ನಿರ್ಮಲಾ ಹೊಂಗಲ, ರೇಣುಕಾ ಕಳ್ಳಿಮನಿ, ರಜಿಯಾಬೇಗಂ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net