ಅಡಚಣೆ ನಿವಾರಿಸಿ ಕಾಮಗಾರಿ ಚುರುಕುಗೊಳಿಸಿ

Badhra Sabhe
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣ ಸಂಬಂಧ ಎಲ್ಲೆಲ್ಲಿ ಅಡಚಣೆ ಇವೆ ತ್ವರಿತವಾಗಿ ನಿವಾರಿಸಿ. ಕಾಮಗಾರಿ ಚುರುಕುಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆ ವಲಯ ಕಚೇರಿಯಲ್ಲಿ ಯೋಜನೆಯ ಕಾಮಗಾರಿ ಕುರಿತು ಅಡಚಣೆಗೆ ಕಾರಣವಾಗಿರುವ ಅಂಶಗಳು, ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ವಿಷಯಗಳಿಗೆ ಪರಿಹಾರ ಕಂಡುಕೊಳ್ಳಲು ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಯೋಜನೆಯಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತಂದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಟಿ.ಹರೀಶ್ ಮಾತನಾಡಿ, ಪ್ಯಾಕೇಜ್ 10ರ ಚಿತ್ರದುರ್ಗ ಶಾಖಾ ಕಾಲುವೆಯ ಸರಪಳಿ 90 ಕಿ.ಮೀಯಿಂದ 104 ಕಿ.ಮೀವರೆಗಿನ, ಪ್ಯಾಕೇಜ್ 11ರಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಮಾರ್ಗ ಮಧ್ಯೆ ಅಲ್ಲಲ್ಲಿ ಅಡೆತಡೆ ಉಂಟಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಕಾಮಗಾರಿಗೆ ಭೂಸ್ವಾಧೀನ ಪಡಿಸಿಕೊಂಡಿರುವ ಈ ಎರಡು ತಾಲೂಕುಗಳ ಕೆಲ ಗ್ರಾಮಗಳಲ್ಲಿ ಅವಾರ್ಡ್ ಮೊತ್ತ ಪಡೆದುಕೊಳ್ಳದೇ ಇರುವುದರಿಂದ ನ್ಯಾಯಾಲಯಗಳಲ್ಲಿ ಠೇವಣಿ ಇಡಲಾಗಿದೆ. ಅಲ್ಲದೆ, ಪಡೆದಿರುವ ರೈತರು ಕಾಮಗಾರಿ ಕೈಗೊಳ್ಳಲು ಅಡ್ಡಿಪಡಿಸುತ್ತಿದ್ದಾರೆ. ಇದನ್ನು ಪರಿಹರಿಸಬೇಕಿದೆ ಎಂದರು.

ಕೆಲವೆಡೆ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ, ಬಗರ್‌ಹುಕುಂ ಅಡಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಖಾತೆದಾರರಿಗೆ ದಯಾತ್ಮಕ ಪರಿಹಾರ ವಿತರಿಸುವ ಸಂಬಂಧ ಭೂ ಅಳತೆಗೆ ತಹಸೀಲ್ದಾರರಿಗೆ ಸೂಚಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.

ಕಾಲುವೆ ಕಾಮಗಾರಿಗೆ ಎಲ್ಲೆಲ್ಲಿ ಅಡ್ಡಲಾರಿ ಇರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಅವಶ್ಯವಿರುವ ಅಂದಾಜು ಪಟ್ಟಿಯನ್ನು ಹಿರಿಯೂರು, ಚಿತ್ರದುರ್ಗದ ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ನೀಡಬೇಕು ಎಂದು ಕೋರಿದರು.

ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಅರ್ಹ ರೈತರಿಗೆ ಪರಿಹಾರ ಬಾಕಿ ಇದ್ದಲ್ಲಿ ನೀಡಿ. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದರೆ, ಮೂಲಾಜಿಲ್ಲದೆ ತೆರವುಗೊಳಿಸಿ ವಶಕ್ಕೆ ಪಡೆಯಿರಿ. ಫಾರಂ ನಂ 57ರಡಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಬಗರ್‌ಹುಕುಂ ಸಾಗುವಳಿ ಪತ್ರ ಸಕ್ರಮಗೊಳಿಸಲು ಸಾಧ್ಯವಿಲ್ಲ. ಅದರಲ್ಲಿ ಅನರ್ಹರೂ ಇರಬಹುದು. ಆದ್ದರಿಂದ ಮಹತ್ವಕಾಂಕ್ಷೆಯ ಯೋಜನೆಗೆ ಅಡ್ಡಿಪಡಿಸಿದಲ್ಲಿ ಅರ್ಜಿ ವಜಾಗೊಳಿಸಲು ಕ್ರಮವಹಿಸಿ ಎಂದು ಸೂಚಿಸಿದರು.

ಭೂಸ್ವಾಧೀನ ನಂತರ ಅವಾರ್ಡ್ ಮೊತ್ತ ಪಡೆಯದೇ ಕಾಮಗಾರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಬೇಕಿದ್ದರೆ ಅಂತವರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಎಲ್ಲೆಲ್ಲಿ ಅಡೆತಡೆ ಇದೆಯೋ ಅಲ್ಲಿ ವೇಗವಾಗಿ ಕಾಮಗಾರಿ ಪೂರ್ಣಗೊಳಿಸಲು ಯಂತ್ರ, ಮಾನವ ಸಂಪನ್ಮೂಲ ಲಭ್ಯವಾಗಿ ಇಟ್ಟುಕೊಳ್ಳಿ. ಅಗತ್ಯವಿದ್ದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದರು.

ಅನುದಾನ ಬಿಡುಗಡೆಗೊಳಿಸಿ: ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಸಂಬಂಧ ಘೋಷಿಸಿರುವ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಬಹುಬೇಗ ಪೂರ್ಣಗೊಳಿಸಲು ಸಹಕರಿಸಬೇಕು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರೂ ಈ ಸಂಬಂಧ ಒತ್ತಡ ಹಾಕಬೇಕು ಎಂದು ಡಿ.ಸುಧಾಕರ್ ಮನವಿ ಮಾಡಿದರು.

ಯೋಜನೆಯ ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್ ಶಿವಪ್ರಕಾಶ್, ಡಿಡಿಎಲ್‌ಆರ್ ರಾಮಾಂಜನೇಯ, ಇಂಜಿನಿಯರ್‌ಗಳಾದ ಎಸ್.ಎಲ್.ವಿವೇಕಾನಂದ, ಚಂದ್ರಪ್ಪ ಬಾರಿಕರ್, ತಹಸೀಲ್ದಾರ್ ಡಾ.ನಾಗವೇಣಿ, ರಾಜೇಶ್, ಬೆಸ್ಕಾಂ ಇಂಜಿನಿಯರ್ ಜಯಣ್ಣ, ಎಡಿಎಲ್‌ಆರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net