

ಶ್ರೀಧರ ಅಣಲಗಾರ ಯಲ್ಲಾಪುರ
ಎರಡು ದಿನಗಳಿಂದ ಲಾಕ್ಡೌನ್ ನಿಯಮಗಳನ್ನು ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಅಡಕೆ ಬೆಳೆಗಾರರು ಅಡಕೆ ಮಾರಾಟಕ್ಕೆ ಎಪಿಎಂಸಿ ಆವಾರಕ್ಕೆ ಲಗ್ಗೆ ಇಡುತ್ತಿದ್ದು, ಅಡಕೆ ವ್ಯವಹಾರ ಭರದಿಂದ ಸಾಗಿದೆ.
ಲಾಕ್ಡೌನ್ ಸಡಿಲಿಕೆಯ ಮೊದಲ ದಿನವಾದ ಸೋಮವಾರ 550 ಕ್ವಿಂಟಾಲ್ ಅಡಕೆ ಮಾರಾಟವಾಗಿದೆ. ಈ ಪೈಕಿ ಚಾಲಿ ಅಡಕೆಯ ಪ್ರಮಾಣ ಹೆಚ್ಚಿದೆ. ಮಂಗಳವಾರ ಇದರ ದುಪ್ಪಟ್ಟು ಅಡಕೆ ಮಾರಾಟಕ್ಕೆ ಬಂದಿದೆ. ಬೆಳಗ್ಗೆಯಿಂದಲೇ ಎಪಿಎಂಸಿ ಆವಾರದಲ್ಲಿ ಅಡಕೆ ಮಾರಾಟಕ್ಕೆ ತಂದ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡುಬಂತು.
ಲಾಕ್ಡೌನ್ ಆರಂಭವಾದ ನಂತರ ಅಡಕೆ ವ್ಯಾಪಾರ ಸ್ಥಗಿತಗೊಳಿಸಲಾಗಿತ್ತು. ಕಳೆದ ವಾರವಷ್ಟೇ ವ್ಯಾಪಾರ ಪುನರಾರಂಭಿಸಲಾಗಿದ್ದು, ಧಾರಣೆಯೂ ಹೆಚ್ಚುತ್ತಿದೆ. ಪ್ರತಿ ವರ್ಷ ಮಾರ್ಚ್, ಏಪ್ರಿಲ್ನಲ್ಲಿ ಅಡಕೆ ಮಾರಾಟದ ಸೀಸನ್ ಇರುತ್ತಿತ್ತು. ಈ ಬಾರಿ ಲಾಕ್ಡೌನ್ನಿಂದಾಗಿ ಆ ಸಮಯದಲ್ಲಿ ಬೆಳೆಗಾರರಿಗೆ ಅಡಕೆ ಮಾರಾಟ ಮಾಡಲು ಆಗಿರಲಿಲ್ಲ.
ಇದೀಗ ಲಾಕ್ಡೌನ್ ಸಡಿಲವಾಗಿರುವುದರಿಂದ ಆರ್ಥಿಕ ಸಮಸ್ಯೆ, ಇತರ ಕಾರಣಗಳಿಗಾಗಿ ಹಣದ ಅವಶ್ಯಕತೆಯೂ ಇರುವುದರಿಂದ ಏಕಾಏಕಿ ಬೆಳೆಗಾರರು ಎಪಿಎಂಸಿಯತ್ತ ಮುಖ ಮಾಡುತ್ತಿದ್ದಾರೆ. ನಿತ್ಯ ಬೆಳಗ್ಗೆ ಬೆಳೆಗಾರರು ತಂದ ಮಹಸೂಲನ್ನು ಮಧ್ಯಾಹ್ನದ ಒಳಗಾಗಿ ಮಾರಾಟ ಮಾಡಿ, ವ್ಯವಹಾರ ಮುಗಿಯುವ ವ್ಯವಸ್ಥೆ ಇತ್ತು. ಆದರೆ, ಇದೀಗ ತಂದ ಬೆಳೆಗಳ ದಾಖಲೀಕರಣವೇ ಮಧ್ಯಾಹ್ನದವರೆಗೆ ನಡೆಯುತ್ತಿದ್ದು, ವ್ಯಾಪಾರದ ಆರಂಭವೇ ಮಧ್ಯಾಹ್ನದ ನಂತರ ಆಗುತ್ತಿದೆ.
ದರ ಕುಸಿಯುವ ಭೀತಿ?: ಏಕಕಾಲಕ್ಕೆ ಬೆಳೆಗಾರರೆಲ್ಲ ಅಡಕೆ ಮಾರಾಟಕ್ಕೆ ಮುಗಿಬೀಳುತ್ತಿರುವುದರಿಂದ ಅಡಕೆ ಧಾರಣೆ ಕುಸಿಯುವ ಭೀತಿಯೂ ಉಂಟಾಗುತ್ತಿದೆ. ಅಡಕೆ ವ್ಯಾಪಾರ ಆರಂಭವಾದಾಗಿನಿಂದ ರಾಶಿ 42,000 ರೂ., ಬೆಟ್ಟೆ 35,000, ಚಾಲಿ 31,000 ರೂ. ಸರಾಸರಿ ದರ ಇದೆ. ಆದರೆ, ಒಂದೇ ಬಾರಿ ಅಡಕೆ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಅಡಕೆ ಮಾರಾಟಕ್ಕೆ ತಂದರೆ ದರ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
40 ದಿನಗಳ ಕಾಲ ವ್ಯಾಪಾರ ನಡೆದಿಲ್ಲ. ಅದಕ್ಕಾಗಿ ಆರಂಭವಾದ ತಕ್ಷಣ ಬೆಳೆಗಾರರು ವ್ಯಾಪಾರಕ್ಕೆ ಮುಂದಾಗುತ್ತಿದ್ದಾರೆ. ಸದ್ಯದ ಮಟ್ಟಿಗೆ ಉತ್ತಮ ಧಾರಣೆ ಇದ್ದು, ಇದರಲ್ಲಿ ಏರಿಕೆ ಕಂಡು ಬರದಿದ್ದರೂ ಇದೇ ದರ ಮುಂದುವರಿಯುವ ಲಕ್ಷಣ ಗೋಚರಿಸುತ್ತಿದೆ. ಇನ್ನೂ ಕಡಿಮೆಯಾಗುವುದಿಲ್ಲವೆಂಬ ನಿರೀಕ್ಷೆಯಿದೆ. | ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ ಯಲ್ಲಾಪುರ ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ
ಅಡಕೆ ವ್ಯಾಪಾರ ಆರಂಭವಾಗಿ, ಲಾಕ್ಡೌನ್ ಸಡಿಲಿಕೆ ಆದ ನಂತರ ಎಪಿಎಂಸಿ ಆವಾರದಲ್ಲಿ ಬೆಳೆಗಾರರಿಂದ ಅಡಕೆ ಮಾರಾಟದ ಜಾತ್ರೆಯೇ ನಡೆಯುತ್ತಿದೆ. ಒಂದೇ ಸಲ ಈ ಪ್ರಮಾಣದಲ್ಲಿ ಆವಕಗೊಂಡರೆ, ದರ ಕುಸಿದು ಬೆಳೆಗಾರರು ಮತ್ತಷ್ಟು ಸಂಕಟಕ್ಕೀಡಾಗುವಂತಾಗುತ್ತದೆ.| ಪಿ. ಜಿ. ಭಟ್ಟ ಬರಗದ್ದೆ ರೈತ ಮುಖಂಡ