

ಡಾನ್ ರಾಮಣ್ಣ ತೀರ್ಥಹಳ್ಳಿ
ತಾಲೂಕಿನಲ್ಲಿ ಭತ್ತ ನಾಟಿಗೆ ರೈತರು ಸಿದ್ಧತೆಯಲ್ಲಿ ತೊಡಗಿದ್ದಾರೆ. ನೀರಾವರಿ 571 ಹೆಕ್ಟೇರ್ ಹಾಗೂ ಮಳೆಯಾಶ್ರಿತ 6099 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದೆ. ರೈತರು ಸಸಿ ಮಡಿ ಮಾಡುವ ಸಿದ್ಧತೆಯಲ್ಲಿದ್ದಾರೆ.
ಭತ್ತ ನಾಟಿಗೆ ಇನ್ನೂ ಒಂದೆರಡು ವಾರ ವಿಳಂಬವಾಗಲಿದೆ. ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದೆ. ಐಟಿಐ ಸಣ್ಣ, ಅಭಿಲಾಶ್, ಎಂಟಿ 100, ಉಮಾ, ಆರ್‌ಎನ್‌ಆರ್ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ.
ಮಾರುಕಟ್ಟೆಯಲ್ಲಿ ಭತ್ತದ ಧಾರಣೆ ಏರಿಳಿತ, ಕೃಷಿ ಕಾರ್ಮಿಕರ ಕೊರತೆ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ಹತಾಶರಾಗಿರುವ ಕೃಷಿಕರು ಭತ್ತ ಬೆಳೆಯುವ ಪ್ರಮಾಣ ಕಡಿಮೆ ಮಾಡಿ ಗದ್ದೆಗಳನ್ನು ಅಡಕೆ ತೋಟವನ್ನಾಗಿ ಪರಿವರ್ತಿಸುತ್ತಿದ್ದಾರೆ. ಹೀಗಾಗಿ ತಾಲೂಕಿನ ಪ್ರಮುಖ ಬೆಳೆಯಾಗಿದ್ದ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಅಡಕೆ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಕಳೆದ ಮೂರ‌್ನಾಲ್ಕು ವರ್ಷದಿಂದ ಬಾಸುತ್ತಿರುವ ಎಲೆಚುಕ್ಕೆ ರೋಗದ ಕಾರಣ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲವೇ ವರ್ಷಗಳ ಹಿಂದೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಇದ್ದ ಭತ್ತ ನಲ್ಲಿ ಬೆಳೆಯುವ ಪ್ರದೇಶ ಇದೀಗ 6670 ಹೆಕ್ಟೇರ್‌ಗೆ ಕುಸಿದಿದೆ. ವರ್ಷದಿಂದ ವರ್ಷಕ್ಕೆ ರೈತರಿಗೆ ಭತ್ತದ ಮೇಲಿನ ಆಸಕ್ತಿ ಇಳಿಮುಖ ಆಗುತ್ತಿರುವುದನ್ನು ಗಮನಿಸಿದರೆ ಕೆಲವೇ ವರ್ಷಗಳಲ್ಲಿ ಭತ್ತದ ಕೃಷಿ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.
ಉತ್ತಮ ಧಾರಣೆ ಇರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ರೈತರು ಅಡಕೆ ಬೆಳೆಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ಪ್ರಸ್ತುತ 16656 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಉಳಿದಂತೆ 338.03 ಹೆಕ್ಟೇರ್ ತೆಂಗು, 399.17 ಹೆಕ್ಟೇರ್ ಬಾಳೆ, 118.37 ಹೆಕ್ಟೇರ್ ಗೋಡಂಬಿ, 385 ಹೆಕ್ಟೇರ್ ರಬ್ಬರ್, 884.69 ಹೆಕ್ಟೇರ್ ಕಾಫಿ, ಉಳಿದಂತೆ ಶುಂಠಿ, ಕಾಳುಮೆಣಸು, ಏಲಕ್ಕಿ, ಶ್ರೀಗಂಧ, ಲವಂಗ ಮುಂತಾದ ಉಪಬೆಳೆಗಳನ್ನು ಬೆಳೆಯಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಅಡಕೆಗೆ ಉತ್ತಮ ಧಾರಣೆ ಹೊರತಾಗಿಯೂ ಅಡಕೆ ಬೆಳೆಗಾರರು ಎಲೆಚುಕ್ಕೆ, ಹಳದಿರೋಗ, ಬೇರುಹುಳು ಬಾಧೆ, ಕಾಡು ಪ್ರಾಣಿಗಳ ಹಾವಳಿ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಆತಂಕದಲ್ಲಿಯೇ ಇದ್ದಾರೆ. ಅದರಲ್ಲೂ ಮುಖ್ಯವಾಗಿ ಪಶ್ಚಿಮಘಟ್ಟ ಪ್ರದೇಶದ ಬೆಳೆಗಾರರ ಸಮಸ್ಯೆ ಗಂಭೀರವಾಗಿಯೇ ಇದೆ.
ಬೇಸಾಯ ಕ್ರಮವೂ ಮುಖ್ಯ
ಹವಾಮಾನ ಬದಲಾವಣೆಯಿಂದ ಕಳೆದ ವರ್ಷ ಅಡಕೆಗೆ ಎಲೆಚುಕ್ಕೆ ರೋಗ ಬಾಧೆ ಆಗುಂಬೆಯಲ್ಲಿ 35ರಿಂದ 40ರಷ್ಟಿದ್ದು, ತಾಲೂಕಿನಲ್ಲಿ ಶೇ.15ರಿಂದ 20ರಷ್ಟು ಕಂಡುಬಂದಿದೆ ಎಂದು ಕೀಟಶಾಸ್ತ್ರ ತಜ್ಞ ಡಾ. ಅಂಜನ್‌ಕುಮಾರ್ ಮಾಹಿತಿ ನೀಡಿದರು. ಅಡಕೆ ಬೆಳೆಗೆ ತಗಲುವ ಎಲ್ಲ ರೋಗಗಳ ನಿಯಂತ್ರಣಕ್ಕೆ ಔಷಧ ಸಿಂಪಡಣೆೆಯಲ್ಲಿ ವೈಜ್ಞಾನಿಕ ಪದ್ಧತಿ ಹಾಗೂ ಸಾಮೂಹಿಕ ನಿಯಂತ್ರಣ ಮಾತ್ರವಲ್ಲದೆ ಬೇಸಾಯ ಕ್ರಮವೂ ಅಷ್ಟೇ ಅಗತ್ಯ. ಈ ಬಗ್ಗೆ ನಿರಂತರವಾಗಿ ಪ್ರಯತ್ನ ನಡೆಯುತ್ತಿದೆ. ಕೇಂದ್ರದಿಂದ ತಾಲೂಕಿನಲ್ಲಿ 25 ತರಬೇತಿ ಶಿಬಿರವನ್ನೂ ನಡೆಸಲಾಗಿದೆ. ಅಡಕೆಗೆ ಕೊಳೆರೋಗ ನಿಯಂತ್ರಣದಲ್ಲಿದೆ. ಹಿಂಗಾರು ಒಣಗು ರೋಗ, ನದಿದಡದ ಪ್ರದೇಶದಲ್ಲಿ ಕೆಲವೆಡೆ ಬೇರು ಹುಳು ಬಾಧೆ ಇದೆ. ರೋಗಗಳ ಸಮಗ್ರ ಹತೋಟಿಗೆ ಬೇಸಾಯ ಕ್ರಮವೂ ಮುಖ್ಯ ಎಂಬುದು ಇವರ ಅಭಿಪ್ರಾಯ.
ಕೊಳೆರೋಗ, ಎಲೆಚುಕ್ಕೆ ಮುಂತಾದ ರೋಗದ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಈವರೆಗೆ ಸೂಕ್ತ ಪರಿಹಾರ ದೊರೆತಿಲ್ಲ. ಎಲೆಚುಕ್ಕೆ ರೋಗದ ಪರಿಣಾಮ ಮರಗಳು ಸಾಯುವುದಲ್ಲದೇ ಶೇ.60ರಷ್ಟು ಫಸಲು ಕಡಿಮೆಯಾಗುತ್ತಿದೆ. ಇದರಿಂದ ಸಾಂಪ್ರದಾಯಿಕ ಬೆಳೆಗಾರರ ಸ್ಥಿತಿ ಶೋಚನೀಯವಾಗಿದೆ. ಅಡಕೆ ತೋಟಗಳ ಮರು ನಿರ್ಮಾಣಕ್ಕೆ ಸರ್ಕಾರ ವಿಶೇಷ ಅನುದಾನ ಘೋಷಿಸಬೇಕು.
ಹಸಿರುಮನೆ ಮಹಾಬಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ತೀರ್ಥಹಳ್ಳಿ
ಸತತವಾಗಿ ಮಳೆ ಆಗುತ್ತಿರುವುದರಿಂದ ಈ ಅವಯಲ್ಲಿ ಅಡಕೆಗೆ ಮೂರು ಬಾರಿ ಔಷಧ ಸಿಂಪಡಿಸುವುದು ಅನಿವಾರ್ಯ. ಆದರೆ ನಿರಂತರ ಮಳೆಯಿಂದ ಅಡಚಣೆ ಆಗುತ್ತಿದ್ದು, ಕೊಳೆರೋಗ ಹೆಚ್ಚುವ ಆತಂಕವಿದೆ. ಇಲಾಖೆಯಲ್ಲಿ ಮೈಲುತುತ್ತ ಖರೀದಿಗೆ ಸಹಾಯಧನ ಲಭ್ಯವಿದೆ. ಹವಾಮಾನ ವ್ಯತ್ಯಾಸವಾದಲ್ಲಿ ಆಗಸ್ಟ್ ನಂತರದಲ್ಲಿ ಎಲೆಚುಕ್ಕೆ ರೋಗ ಉಲ್ಬಣಗೊಳ್ಳುವ ಸಾಧ್ಯತೆಯೂ ಇದೆ.
ಸೋಮಶೇಖರ್
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ, ತೀರ್ಥಹಳ್ಳಿ
ಭತ್ತದ ಕೃಷಿಗೆ ವರ್ಷವಿಡೀ ದುಡಿಯಬೇಕು. ಆದರೆ ಇಂದಿಗೂ 10 ವರ್ಷದ ಹಿಂದಿನ ಧಾರಣೆಯೇ ಇದೆ. ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ರೋಗರುಜಿನ ಕಾಡುಪ್ರಾಣಿಗಳ ಹಾವಳಿ ಮುಂತಾದ ಕಾರಣಗಳಿಂದಾಗಿ ಭತ್ತದ ಬೆಳೆ ಇಂದು ಈ ಭಾಗದ ರೈತರಿಗೆ ಲಾಭದಾಯಕವಾಗಿ ಉಳಿದಿಲ್ಲ. ಪಹಣಿಯಲ್ಲಿ ಬೀಳು ಎಂದಾಗಬಾರದು ಎಂಬ ಕಾರಣಕ್ಕೆ ರೈತರು ನಷ್ಟವಾದರೂ ಭತ್ತ ಬೆಳೆಯುತ್ತಿದ್ದಾರೆಯೇ ಹೊರತು ಬೆಳೆಯಲೇಬೇಕೆಂಬ ಆಸಕ್ತಿಯಿಂದಲ್ಲ.
ಪಟೇಲ್ ವೆಂಕಟೇಶ ಹೆಗ್ಡೆ, ಮೇಗರವಳ್ಳಿ ರೈತ
ತಾಲೂಕಿನಲ್ಲಿ ಈ ವರ್ಷ ಹದವಾದ ಮಳೆಯಾಗಿದ್ದು ಭತ್ತದ ಬೆಳೆಗೆ ಅತ್ಯಂತ ಪೂರಕವಾದ ವಾತಾವರಣವಿದೆ. ಭತ್ತ ಬಿತ್ತನೆಬೀಜ, ರಸಗೊಬ್ಬರ ದಾಸ್ತಾನಿದೆ. ಯಾವುದಕ್ಕೂ ಕೊರತೆ ಇಲ್ಲ. ಹವಾಮಾನ ವೈಪರೀತ್ಯ, ಬೆಳೆಹಾನಿಯ ಬಗ್ಗೆ ಫಸಲ್ ಭಿಮಾ ಯೋಜನೆಯಡಿ ರೈತರು ತಪ್ಪದೇ ಬೆಳೆ ವಿಮೆ ಮಾಡಿಸಿಕೊಳ್ಳುವುದು ಸೂಕ್ತ.
ಪ್ರವೀಣ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ