ಅಡಕೆ ವ್ಯಾಪಾರಿಗಳ ಮೇಲೆ ಹಲ್ಲೆ, ದರೋಡೆ: ವಾಹನದೊಂದಿಗೆ 1.5 ಲಕ್ಷ ರೂ. ದೋಚಿ ಪರಾರಿ

mysore
Published on

ಮೈಸೂರು: ರಾಜ್ಯದಲ್ಲಿ ಎಟಿಎಂ, ಬ್ಯಾಂಕ್ ದರೋಡೆ ಪ್ರಕರಣಗಳು ಮಾಸುವ ಮುನ್ನವೇ ಮೈಸೂರಿನಲ್ಲೂ ಕಾರು ಅಡ್ಡಗಟ್ಟಿ ಹಾಡಹಗಲೇ ರಾಬರಿ ಮಾಡಲಾಗಿದೆ.

ಮೈಸೂರು ತಾಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರದ ಬಳಿ ಸೋಮವಾರ ಈ ಘಟನೆ ಸಂಭವಿಸಿದೆ. ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಕಾರಿನೊಂದಿಗೆ 1.5 ಲಕ್ಷ ರೂ. ಕಸಿದುಕೊಂಡು ಪರಾರಿಯಾಗಿದ್ದಾರೆ. ಮುಸುಕುಧಾರಿಗಳ ನಾಲ್ವರ ತಂಡ ಈ ಕೃತ್ಯ ಎಸಗಿದೆ. ಕೇರಳದ ಸುಲ್ತಾನ್ ಬತ್ತೇರಿಯ ವ್ಯಾಪಾರಿ ಮಹಮ್ಮದ್ ಅಶ್ರ್ ಮತ್ತು ಕಾರು ಚಾಲಕ ಸೂಫಿ ಹಲ್ಲೆಗೊಳಗಾದವರು.

ಅಡಕೆ ಖರೀದಿಗೆ ಕಾರಿನಲ್ಲಿ ತೆರಳುತ್ತಿದ್ದ ಈ ಇಬ್ಬರು 1.5 ಲಕ್ಷ ರೂ. ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎರಡು ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿದ್ದಾರೆ. ಇಬ್ಬರನ್ನು ಕಾರಿನಿಂದ ಕೆಳಗೆ ಇಳಿಸಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಹಲ್ಲೆ ಮಾಡಿದ್ದಾರೆ. ನಂತರ ಅವರನ್ನು ಕಾರಿನಿಂದ ಹೊರಗೆ ತಳ್ಳಿ ಹಣವಿದ್ದ ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿದ್ದ ಇಬ್ಬರನ್ನು ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ವಿಷ್ಣುವರ್ಧನ್, ಎಎಸ್‌ಪಿ ಮಲ್ಲಿಕ್, ಡಿವೈಎಸ್ಪಿ ರಘು, ಜಯಪುರ ಎಸ್‌ಐ ಪ್ರಕಾಶ್ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಹಲ್ಲೆಗೊಳದಾವರು ನೀಡಿದ ದೂರಿನ ಮೇರೆಗೆ ಜಯಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ದರೋಡೆ ದೃಶ್ಯ ಮೊಬೈಲ್‌ನಲ್ಲಿ ಸೆರೆ

ವ್ಯಾಪಾರಿಗಳನ್ನು ಮುಸುಕುಧಾರಿಗಳ ತಂಡ ಕಾರಿನಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸುತ್ತಿದ್ದ ದೃಶ್ಯವನ್ನು ಹಿಂದೆ ಬರುತ್ತಿದ್ದ ಕಾರಿನ ಚಾಲಕರೊಬ್ಬರು ಮೊಬೈಲ್‌ನಲ್ಲೇ ಸೆರೆ ಹಿಡಿದ್ದಾರೆ. ಅದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದರೋಡೆಕೋರರ ಕಾರು ಯಾವ ಮಾರ್ಗದಲ್ಲಿ ಹಾದು ಹೋಗಿದೆ ಎಂಬುದರ ಬಗ್ಗೆ ಸಿಸಿ ಟಿವಿ ಕ್ಯಾಮರಾದಲ್ಲಿ ಮಾಹಿತಿ ದೊರೆತಿದೆ.

ನಾಲ್ಕು ತಂಡ ರಚನೆ

ನಾಲ್ವರು ಎರಡು ಕಾರುಗಳಲ್ಲಿ ಬಂದು ದರೋಡೆ ಮಾಡಿದ್ದಾರೆ. ಹಣ ಸಾಗಿಸುತ್ತಿದ್ದ ಕಾರಿನಲ್ಲಿ ಚಾಲಕ ಸೇರಿದಂತೆ ಇಬ್ಬರು ಇದ್ದರು. ಈ ಇಬ್ಬರ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದರು.

ದರೋಡೆಕೋರರ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಹೆದ್ದಾರಿಯಲ್ಲಿನ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಖದೀಮರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಗಡಿಭಾಗದಲ್ಲಿ ಅಲರ್ಟ್ ಮಾಡಲಾಗಿದೆ. ಕೇರಳದ ವಯನಾಡಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net