

ಬಾಳೆಹೊನ್ನೂರು: ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂಬುದನ್ನು ವೈಜ್ಞಾನಿಕವಾಗಿ ಸಂಶೋಧನೆ ನಡೆಸಲು ಕ್ಯಾಂಪ್ಕೋ ಮನವಿ ಮೇರೆಗೆ ಕೇಂದ್ರ ಸರ್ಕಾರ ವಿವಿಧ ಸಂಶೋಧನಾ ಸಂಸ್ಥೆಗಳಿಗೆ 9 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಹೇಳಿದರು.
ರಂಭಾಪುರಿ ಪೀಠದಲ್ಲಿ ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕೃಷಿ ಸಮ್ಮೇಳನದ ಅಡಕೆಯ ಅಂಗಳ ಮಾತು-ಮಂಥನ ಗೋಷ್ಠಿಯಲ್ಲಿ ಮಾತನಾಡಿದರು.
ಪಶು ಆಹಾರ, ಖರ್ಜೂರ ರೂಪದಲ್ಲಿ ವಿದೇಶಗಳಿಂದ ಅಡಕೆ ಕಳ್ಳ ಮಾರ್ಗದಲ್ಲಿ ಭಾರತ ಪ್ರವೇಶಿಸುತ್ತಿದೆ. ಇದನ್ನು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ತಡೆಯಬೇಕು. ಅಡಕೆಯ ಗೊರಬಲನ್ನು ಪಾಲಿಶ್ ಮಾಡಿ ರೆಡ್ ಆಕ್ಸೈಡ್ ಮಿಶ್ರಣ ಮಾಡಿದ ಪರಿಣಾಮ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದೆ. ಅಡಕೆ ಖರೀದಿಸುವ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಸ್ವಂತ ಲ್ಯಾಬ್ ಹೊಂದಿದ್ದು, ರೆಡ್ ಆಕ್ಸೈಡ್ ಮಿಶ್ರಿತ ಅಡಕೆಯನ್ನು ವಾಪಸ್ ಕಳಿಸುತ್ತಿದ್ದಾರೆ. ಹುರಿದ ಅಡಕೆ ಎಂಬ ಹೆಸರಿನಲ್ಲಿ ದೇಶಕ್ಕೆ ಅಡಕೆ ಆಮದಾಗುತ್ತಿದೆ. ಇದು ಕೂಡ ಬೆಲೆ ಕುಸಿತಕ್ಕೆ ಕಾರಣ ಎಂದು ತಿಳಿಸಿದರು.
ಕಾಫಿ ಮಂಡಳಿ ಸದಸ್ಯ ಜಿ.ಎಸ್.ಮಹಾಬಲ ರಾವ್ ಮಾತನಾಡಿ, ಮಲೆನಾಡಿನಲ್ಲಿ ಅಡಕೆಯೇ ಜೀವನಾಧಾರವಾಗಿದೆ. ಆದರೆ ಬಯಲುಸೀಮೆಯಲ್ಲಿ ಆಹಾರ ಧಾನ್ಯ ಬೆಳೆಯುವುದನ್ನು ಬಿಟ್ಟು ಅಡಕೆ ಬೆಳೆಯಲಾಗುತ್ತಿದೆ. ಇದರ ವಿಸ್ತರಣೆ ಬಳ್ಳಾರಿಗೂ ತಲುಪಿದ್ದು, ಪಕ್ಕದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಬೆಳೆ ಪ್ರಮಾಣ ಹೆಚ್ಚಾಗುತ್ತಿದೆ. ಆಂಧ್ರ ಪ್ರದೇಶದಲ್ಲಿ ಆರು ಕೋಟಿ ಅಡಕೆ ಸಸಿಯನ್ನು ಒಂದು ಲಕ್ಷ ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಗಿದ್ದು, ಈ ಬೆಳೆ ಕೈಗೆ ಸಿಗುವ ವೇಳೆ ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತ ಏನಾಗಬಹುದೆಂಬ ಆತಂಕ ಎಲ್ಲರಲ್ಲಿದೆ ಎಂದರು.
ಅಡಕೆಯ ಉಪಯೋಗವನ್ನು ಸಂಶೋಧಿಸುವ ಕೆಲಸವಾಗಬೇಕು. ಅಡಕೆ ಬೆಳೆಗಾರರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಅಡಕೆ ಮಂಡಳಿ ಸ್ಥಾಪನೆ ಅಗತ್ಯವಿದೆ. ಹಳದಿ ಎಲೆ ರೋಗ ಬಂದು 75 ವರ್ಷ ಕಳೆದರೂ ಪರಿಹಾರ ದೊರೆತಿಲ್ಲ. ಇದರಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದ ರೈತರು ಊರು ತೊರೆಯುತ್ತಿದ್ದು, ಹಳ್ಳಿಗಳು ವೃದ್ಧಾಶ್ರಮವಾಗುತ್ತಿವೆ. ಸಹಕಾರ ಸಂಸ್ಥೆಗಳು ರೈತರ ಸಹಯೋಗದೊಂದಿಗೆ ಸಂಶೋಧನಾ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ 7 ಲಕ್ಷ ಟನ್ ಕಾಫಿ ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ ತಿಳಿಸಿದರು.
ಕೃಷಿ ಸಮ್ಮೇಳನದ ಕಾಫಿಯ ಕಣಜ-ಚಿಂತನ ಕಣ ಗೋಷ್ಠಿಯಲ್ಲಿ ಮಾತನಾಡಿ, ಕಾಫಿ ತೋಟಗಳಿಗೆ ಅನುಭವಸ್ಥ ಮೇಲ್ವಿಚಾರಕರು ಮತ್ತು ವ್ಯವಸ್ಥಾಪಕರ ಕೊರತೆ ಎಲ್ಲೆಡೆ ಕಂಡುಬಂದಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಾಫಿ ಸಂಶೋಧನಾ ಕೇಂದ್ರದಲ್ಲಿ ಎಸ್ಟೇಟ್ ಮ್ಯಾನೇಜ್‌ಮೆಂಟ್ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದೇಶಾದ್ಯಂತ 150 ಅರ್ಜಿಗಳು ಬಂದಿವೆ. ಜತೆಗೆ ಬೆಳೆಗಾರನಿಂದ ಬಳಕೆದಾರರವರೆಗೆ ಕಾಫಿಯನ್ನು ಇಂಡಿಕಾ ಎಂಬ ಬ್ರಾೃಂಡ್ ಮಾಡಿ ಗುಣಮಟ್ಟದ ಕಾಫಿ ತಲುಪಿಸಲು ಯೋಚಿಸುತ್ತಿದ್ದು, ಕೆಫೆ ತೆರೆಯಲು ತರಬೇತಿ ನೀಡುತ್ತಿದ್ದೇವೆ. ಡಿಸೆಂಬರ್ ಬಳಿಕ ಯೂರೋಪ್ ಒಕ್ಕೂಟ ನೆರಳುರಹಿತ ಕಾಫಿ ಖರೀದಿ ಸ್ಥಗಿತಗೊಳಿಸುತ್ತದೆ. ಭಾರತದ ಕಾಫಿ ಬೆಳೆಗಾರರು ನೆರಳಿನ ಅಡಿಯಲ್ಲಿ ಕಾಫಿ ಬೆಳೆಯುವುದರಿಂದ ಮುಂದಿನ ದಿನಗಳಲ್ಲಿ ವರದಾನವಾಗಲಿದೆ ಎಂದು ಹೇಳಿದರು.
ಕಾಫಿ ಮಂಡಳಿ ಸದಸ್ಯ ಎ.ಜಿ.ದಿವಿನ್ ರಾಜ್ ಮಾತನಾಡಿ, ಬೆಳೆಗಾರರು ತೋಟಗಳ ಕಾರ್ಮಿಕರಿಗೆ ವಿಮೆ ಮಾಡಿಸುವುದು ಒಳ್ಳೆಯದು. ಮಣ್ಣು ಪರೀಕ್ಷೆ ನಡೆಸಿ ಗೊಬ್ಬರ ನೀಡಿದಲ್ಲಿ ಅಧಿಕ ಬೆಳೆ ಬೆಳೆಯಲು ಸಾಧ್ಯ ಎಂದರು.
ಕೆಜಿಎಫ್ ಖಜಾಂಚಿ ಎಂ.ಕೆ.ಸುಂದರೇಶ್, ಡಾ. ಎಚ್.ಎಸ್.ಕೃಷ್ಣಾನಂದ, ಕೆ.ಟಿ.ವೆಂಕಟೇಶ್, ಎಚ್.ಎಸ್.ಕೌಶಿಕ್ ಪಟೇಲ್, ಯಜ್ಞಪುರುಷ ಭಟ್, ಟಿ.ಆರ್.ಧರ್ಮಪ್ಪ ಗೌಡ, ಮಹಮ್ಮದ್ ಹನೀಫ್, ಜಾಹ್ನವಿ ಜಯರಾಮ್, ಸತೀಶ್ ಅರಳಿಕೊಪ್ಪ, ಒ.ಡಿ.ಸ್ಟೀಫನ್, ಚಂದ್ರಶೇಖರ್ ರೈ, ಕಾರ್ಗದ್ದೆ ಕಾರ್ತಿಕ್, ಕೆ.ಎಂ.ರಾಘವೇಂದ್ರ, ಶಿಕ್ಷಕ ಸುರೇಂದ್ರ, ಸೋಮೇಶ್ ಗೌಡ, ಎಂ.ವಿ.ಶ್ರೀನಿವಾಸ ಗೌಡ ಇತರರಿದ್ದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಸಚಿನ್‌ಕುಮಾರ್, ಮಲೆನಾಡು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಪ್ರಕಾಶ್, ಎಂ.ಎಸ್.ಅರುಣೇಶ್, ಕೆ.ಟಿ.ಗೋವಿಂದೇಗೌಡ, ಚನ್ನಕೇಶವ ಬರಗಲ್, ಇಬ್ರಾಹಿಂ ಶಾಫಿ, ಸಿ.ಟಿ.ರೇವತಿ, ಡಿ.ರಾಜೇಂದ್ರ, ಆರ್.ಡಿ.ಮಹೇಂದ್ರ, ಜ್ಯೋತಿ ಮೂರ್ತಿ, ಮಹಮ್ಮದ್ ಜುಹೇಬ್, ಎಂ.ಜೆ.ಮೋಹನ್, ಸಿ.ವಿ.ಸುನೀಲ್ ಇತರರಿದ್ದರು.