ಅಡಕತ್ತರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ!

Mysore University1
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರು ವಿಶ್ವವಿದ್ಯಾಲಯ ಅನುಷ್ಠಾನಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಇದೀಗ ಅಡಕತ್ತರಿಗೆ ಸಿಲುಕಿದೆ. ಎನ್‌ಇಪಿ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆಯೇ? ಇಲ್ಲವೇ? ಹಳೆಯ ಶೈಕ್ಷಣಿಕ ಪದ್ಧತಿಯೇ ಮರು ಜಾರಿಗೆ ಬರಲಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಎನ್‌ಇಪಿಯ ಭವಿಷ್ಯ ಏನಾಗಲಿದೆ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಮೂಡಿದೆ. ಈ ಕುರಿತು ವಿಶ್ವವಿದ್ಯಾಲಯಕ್ಕೂ ಸ್ಪಷ್ಟತೆ ಇಲ್ಲ. ಆದರೆ, ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲಿ ಎನ್‌ಇಪಿ ಯಥಾವತ್ತಾಗಿ ಮುಂದುವರಿಯಲಿದ್ದು, ಮುಂದಿನ ವರ್ಷದಿಂದ ರದ್ದಾಗಿ ಹಳೆಯ ಶೈಕ್ಷಣಿಕ ವ್ಯವಸ್ಥೆಯೇ ಮರು ಜಾರಿಯಾಗುವ ಸಾಧ್ಯತೆ ಇದೆ. ಇದು ಬಹಳಷ್ಟು ಬೋಧಕರು, ವಿದ್ಯಾರ್ಥಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ಎನ್‌ಇಪಿ ರದ್ದಿಗೆ ಗಂಭೀರ ಚಿಂತನೆ:
ಈಗಾಗಲೇ ಜಾರಿಯಲ್ಲಿರುವ ಎನ್‌ಇಪಿಯನ್ನು ರದ್ದುಪಡಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಇದೀಗ ಅಧಿಕಾರಕ್ಕೆ ಬಂದಿರುವ ಆ ಪಕ್ಷ ಎನ್‌ಇಪಿ ರದ್ದುಪಡಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ. ಹೀಗಾಗಿ, ಮೈಸೂರು ವಿ.ವಿ.ಯಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಗತಿ ಏನಾಗಲಿದೆ ಎಂಬುದು ಈಗ ಚರ್ಚಾ ವಿಷಯವಾಗಿದೆ.

ಯಶಸ್ಸು ಕಾಣದ ಯೋಜನೆ:
ಮೈಸೂರು ವಿ.ವಿ.ಯಲ್ಲಿ 2021-22ನೇ ಸಾಲಿನಿಂದಲೇ ಎನ್‌ಇಪಿ ಜಾರಿಯಲ್ಲಿದ್ದು, 2 ವರ್ಷ ಪೂರೈಸಿ 3ನೇ ವರ್ಷಕ್ಕೆ ಕಾಲಿಟ್ಟಿದೆ. 2021-22, 2022-23ರಲ್ಲಿ ಸ್ನಾತಕ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಕ್ರಮವಾಗಿ 3ನೇ ಮತ್ತು 2ನೇ ವರ್ಷದಲ್ಲಿ ಕಲಿಯುತ್ತಿದ್ದಾರೆ. ಪ್ರಸ್ತಕ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಆದರೆ, ಎನ್‌ಇಪಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಬದಲಿಗೆ ಶೈಕ್ಷಣಿಕ ವ್ಯವಸ್ಥೆಯೇ ಹಳಿ ತಪ್ಪುವಂತೆ, ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುವಂತೆ ಮಾಡಿದೆ.

ದಾಖಲಾತಿ ಇಳಿಕೆ:
ಎನ್‌ಇಪಿ ಪ್ರಕಾರ ಸ್ನಾತಕ ಪದವಿ (ಯುಜಿ) ಅವಧಿಯನ್ನು 3 ರಿಂದ 4 ವರ್ಷಕ್ಕೆ ಹೆಚ್ಚಿಸಿರುವುದರಿಂದ ಬಿಎಸ್ಸಿ ಕೋರ್ಸ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಬಿಎಸ್ಸಿ ಬದಲಿಗೆ ವೃತ್ತಿಪರ ಇಂಜಿನಿಯರಿಂಗ್ ಕೋರ್ಸ್ ಕಡೆಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದು ಪದವಿ ಕಾಲೇಜಿನಲ್ಲಿ ಪ್ರವೇಶಾತಿ ಇಳಿಕೆಗೆ ಕಾರಣವಾಗಿದೆ. ಮೈಸೂರು ವಿ.ವಿ.ಯಲ್ಲೇ ಹೆಚ್ಚು ಬಿಎಸ್ಸಿ ಸೀಟುಗಳಿರುವ ಯುವರಾಜ ಕಾಲೇಜಿನಲ್ಲಿ ಕಳೆದ 3 ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಸಿದಿದೆ. 3 ವರ್ಷದ ಹಿಂದೆ 1,200 ಸೀಟುಗಳಿಗೆ 3,200 ಅರ್ಜಿಗಳು ಬರುತ್ತಿದ್ದವು. ಇದೀಗ ಸಾವಿರ ಅರ್ಜಿಗಳೂ ಬಂದಿಲ್ಲ. ಇಲ್ಲಿಯವರೆಗೂ 500 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ತಗ್ಗಿದ ಅವಕಾಶಗಳು:
ಸ್ನಾತಕ ಪದವಿಯಲ್ಲಿ ಕಲಿಕೆಯನ್ನು 3 ವಿಷಯಗಳ ಬದಲು 2 ವಿಷಯಗಳಿಗೆ ಇಳಿಕೆ ಮಾಡಿರುವುದು ವಿದ್ಯಾರ್ಥಿಗಳ ಭವಿಷ್ಯದ ಅವಕಾಶವನ್ನು ಕಿತ್ತುಕೊಂಡಂತಾಗಿದೆ. ಒಂದು ವಿಷಯ ಕಲಿಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಇದು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಆಯ್ಕೆ ಮತ್ತು ಅವಕಾಶವನ್ನು ಕಡಿಮೆಗೊಳಿಸಿದೆ.

ಹಳ್ಳಿ ವಿದ್ಯಾರ್ಥಿಗಳಿಗೆ ತೊಂದರೆ:
ಪ್ರಥಮ ದರ್ಜೆ ಕಾಲೇಜುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಕೇಂದ್ರೀಕೃತ ‘ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ’ ವಿದ್ಯಾರ್ಥಿಗಳ ಪಾಲಿಗೆ ಕಂಟಕವಾಗಿದೆ. ದಾಖಲಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಿರುವುದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇಂಟರ್‌ನೆಟ್ ಸೌಲಭ್ಯ ಸಮಸ್ಯೆ, ಅರಿವಿನ ಕೊರತೆಯಿಂದಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಅನನುಕೂಲವಾಗಿದೆ. ಕೆಲ ವಿದ್ಯಾರ್ಥಿಗಳಿಗೆ ಸ್ನಾತಕ ಪದವಿಗೆ ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ. ಇದರಿಂದಲೂ ದಾಖಲಾತಿ ಕಡಿಮೆಯಾಗಿದೆ. ಈಗ ಬಹಳಷ್ಟು ವಿದ್ಯಾರ್ಥಿಗಳು ಬಂದು ಕಾಲೇಜಿನಲ್ಲಿ ವಿಚಾರಿಸುತ್ತಿದ್ದಾರೆ. ಎನ್‌ಇಪಿ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಶಾಪವಾಗಿ ಕಾಡುತ್ತಿದೆ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಪಿಜಿಯಲ್ಲಿ ಇನ್ನೂ ಜಾರಿ ಆಗಿಲ್ಲ:
ಮೈಸೂರು ವಿವಿಯ ಸ್ನಾತಕೋತ್ತರ ಪದವಿಯಲ್ಲಿ(ಪಿಜಿ) ಎನ್‌ಇಪಿ ಜಾರಿಯಾಗಿಲ್ಲ. ಬದಲಿಗೆ ಹಳೇ ಪಠ್ಯಕ್ರಮದಂತೆ ಶೈಕ್ಷಣಿಕ ಚಟುವಟಿಕೆ ಮುಂದುವರಿಯುತ್ತಿದೆ.

ವಿಜ್ಞಾನ ಕಲಿಕೆಗೆ ನಿರಾಸಕ್ತಿ:
ಎನ್‌ಇಪಿ ಆಧಾರಿತ ನಾಲ್ಕು ವರ್ಷದ ಪದವಿ ಕೋರ್ಸ್‌ನ ಮಧ್ಯದಲ್ಲೇ ವಿದ್ಯಾರ್ಥಿ ಇಚ್ಛೆಯಂತೆ ಪ್ರವೇಶ ಮತ್ತು ನಿರ್ಗಮನಕ್ಕೂ ಅವಕಾಶವಿದ್ದು, ಇದರಿಂದ ಉನ್ನತ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಲು ಉತ್ತೇಜಿಸಿದಂತಾಗಿದೆ. ಪದವಿ ತರಗತಿಗಳಲ್ಲಿ ಬಹುಶಿಸ್ತೀಯ ಕಾರ್ಯಕ್ರಮ ಅಳಡಿಸಲಾಗಿದ್ದು, ಇದರಿಂದ ಕಲಾ ವಿದ್ಯಾರ್ಥಿ ವಿಜ್ಞಾನದ ಕೆಲ ಕೋರ್ಸ್‌ಗೆ ಸೇರಬಹುದು. ಅಂತೆಯೆ, ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಲಾ ಕೋರ್ಸ್ ಅನ್ನೂ ಅಧ್ಯಯನ ಮಾಡಬಹುದು. ಕಲಾ, ವಾಣಿಜ್ಯ ಕೋರ್ಸ್‌ಗಳಿಗೆ ಅಂತಹ ಸಮಸ್ಯೆಯಾಗಿಲ್ಲ. ಆದರೆ, ಬಿಎಸ್ಸಿ ಬದಲಿಗೆ ಬಿಸಿಎ ಕಲಿಕೆಗೆ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದು, ವಿಷಯ ಬದಲಾವಣೆಗೆ ಮುಂದಾಗಿದ್ದಾರೆ.

ಸದ್ಯಕ್ಕೆ ಸಮಸ್ಯೆ ಇಲ್ಲ:
ಸ್ನಾತಕ ಪದವಿಯಲ್ಲಿ ಒಂದು ವರ್ಷ ಮುಗಿದ ನಂತರ ಪ್ರಮಾಣಪತ್ರ (ಸರ್ಟಿಫಿಕೇಟ್ ಕೋರ್ಸ್), 2ನೇ ವರ್ಷ ಪೂರೈಸಿದ ಬಳಿಕ ಡಿಪ್ಲೊಮಾ, 3ನೇ ವರ್ಷ ಮುಗಿದ ಬಳಿಕ ಬ್ಯಾಚುಲರ್ ಡಿಗ್ರಿ ಮತ್ತು 4ನೇ ವರ್ಷ ಪೂರ್ಣಗೊಳಿಸುವ ಬಿಎಸ್ಸಿ, ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಆನರ್ಸ್ ಪದವಿ ನೀಡಲಾಗುತ್ತದೆ. ಈಗಾಗಲೇ ಪ್ರವೇಶಾತಿ ಪಡೆದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಸ್ನಾತಕ ಪದವಿಯಲ್ಲಿ ಮಾತ್ರ ಎನ್‌ಇಪಿ ಜಾರಿಯಲ್ಲಿದ್ದು, ಸ್ನಾತಕೋತ್ತರ ಪದವಿಯಲ್ಲಿ ಇನ್ನೂ ಅನುಷ್ಠಾನಗೊಳಿಸಿಲ್ಲ. ಎನ್‌ಇಪಿ ರದ್ದು ಕುರಿತು ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಈ ಹೊಸ ಶೈಕ್ಷಣಿಕ ವ್ಯವಸ್ಥೆ ದಾಖಲಾತಿ ಮೇಲೆ ಪರಿಣಾಮ ಬೀರಿದೆ. ವಿಷಯ ಬದಲಾವಣೆಗೆ ವಿದ್ಯಾರ್ಥಿಗಳು ಹೆಚ್ಚು ಉತ್ಸುಕರಾಗಿದ್ದು, ಬಿಎಸ್ಸಿಗಿಂತ ಬಿಸಿಎ ಓದಲು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

> ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿಶ್ವವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net