ಅಟವಿ ಮಠದ ಉತ್ತರಾಧಿಕಾರಿಗೆ ದೀಕ್ಷೆ

12
Published on

ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸ್ವಾಮೀಜಿಯ ಚರಪಟ್ಟಾಧಿಕಾರ ಮಹೋತ್ಸವ

ತುಮಕೂರು: ಅಟವಿ ಜಂಗಮ ಸುಕ್ಷೇತ್ರದ ಉತ್ತರಾಧಿಕಾರಿಯಾಗಿ ಮಲ್ಲಿಕಾರ್ಜುನ ದೇವರು ಸ್ವಾಮೀಜಿ ಅವರ ಚರಪಟ್ಟಾಧಿಕಾರ ಮಹೋತ್ಸವ ಸೋಮವಾರ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ತಾಲೂಕಿನ ಚಿಕ್ಕತೊಟ್ಲುಕೆರೆಯ ಅಟವಿ ಸುಕ್ಷೇತ್ರದಲ್ಲಿ ಸೋಮವಾರ ಬ್ರಾಹ್ಮಿ ಮುಹೂರ್ತದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಿರಾಭಾರಿ ನಿರಂಜನ ಜಂಗಮ ದೀಕ್ಷೆ ಚಿನ್ಮಯ ಅನುಗ್ರಹವನ್ನು ಶ್ರೀ ಮಠದ ಅಧ್ಯಕ್ಷ ಅಟವಿ ಶಿವಲಿಂಗ ಸ್ವಾಮೀಜಿಗಳು ನೂತನ ಉತ್ತರಾಧಿಕಾರಿ ಮಲ್ಲಿ ಕಾರ್ಜುನ ಸ್ವಾಮೀಜಿಗಳಿಗೆ ನೀಡಿದರು.

ಅಟವಿ ಕ್ಷೇತ್ರದ ವಿದ್ಯಾರ್ಥಿಯಾಗಿರುವ ಮಲ್ಲಿ ಕಾರ್ಜುನ ದೇವರು ಸ್ವಾಮೀಜಿ ಪೂರ್ವಾ ಶ್ರಮವು ಮೂಲತ@ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಸಾಸನೂರು ಗ್ರಾಮ. 21ನೇ ವಯಸ್ಸಿನಲ್ಲಿ ಅಟವಿ ಮಠದ ಚರಪಟ್ಟಾಧಿಕಾರ ಸ್ವೀಕಾರ ಮಾಡಿದರು. ತಂದೆ ಬಸಯ್ಯ ಹಿರೇಮಠ, ತಾಯಿ ಸಂಗಮ್ಮಅವರು ಈ ಸಮಾರಂಭದಲ್ಲಿ ಪುತ್ರನನ್ನು ಶ್ರೀಮಠಕ್ಕೆ ಧಾರೆ ಎರೆದರು. ಭವಬಂಧನ ತ್ಯಜಿಸಿದ ಮಲ್ಲಿಕಾರ್ಜುನ ದೇವರನ್ನು ಸ್ವೀಕಾರ ಮಾಡಿದ ಅಟವಿ ಶಿವಲಿಂಗ ಸ್ವಾಮೀಜಿ, ಶ್ರೀಗಳಿಗೆ ದೀಕ್ಷೆ ನೀಡಿ ಸಮಾಜಕ್ಕೆ ಅರ್ಪಣೆ ಮಾಡಿದರು.

ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಬೆಟ್ಟದಹಳ್ಳಿ ಗವಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಮಲ್ಲಿಕಾರ್ಜುನ ದೇವರು ಸ್ವಾಮೀಜಿಗಳ ದೀಕ್ಷೆ ಅನುಗ್ರಹ ಸಮಾರಂಭಕ್ಕೆ ಸಾಕ್ಷಿಯಾದರು.ನಂತರ ಮಠದಲ್ಲಿ ವಿವಿಧ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮ, ನೂತನ ಶ್ರೀಗಳ ಪಲ್ಲಕ್ಕಿ ಉತ್ಸವ ನೆರವೇರಿದವು. ನಂತರ ಚಿಕ್ಕತೊಟ್ಲುಕೆರೆ ಗ್ರಾಮದ

ಪ್ರಮುಖ ಬೀದಿಗಳಲ್ಲಿ ಮಲ್ಲಿಕಾರ್ಜುನ ದೇವರು ಸ್ವಾಮೀಜಿಗಳ ಉತ್ಸವ ಹಮ್ಮಿಕೊಳ್ಳಲಾಗಿತ್ತು.

124ನೇ ಪುಣ್ಯಸ್ಮರಣೋತ್ಸವ:ಸಂಜೆ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಅಟವಿ ಮಹಾಸ್ವಾಮಿಗಳ 124ನೇ ಪುಣ್ಯಸ್ಮರಣೆ, ಅಟವಿ ಶಿವಲಿಂಗ ಸ್ವಾಮೀಜಿಗಳ ಪೀಠಾರೋಹಣದ ರಜತ ಮಹೋತ್ಸವ ಸಮಾರಂಭ ನೆರವೇರಿತು. ಇದರ ಅಂಗವಾಗಿ ರೊಟ್ಟಿ ಜಾತ್ರೆ, ಕಾರ್ತಿಕ ಲಕ್ಷ ದೀಪೋತ್ಸವ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತುಮಕೂರು ನಗರ ವೀರಶೈವ ಸಮಾಜ ಅಧ್ಯಕ್ಷ, ಮಠದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಟಿ.ಬಿ.ಶೇಖರ್​, ಮಠದ ಆಡಳಿತ ಮಂಡಳಿ ಟ್ರಸ್ಟಿಗಳಾದ ಸಿ.ಮಹದೇವಪ್ಪ, ಮಂಜುನಾಥ್​ ಬದ್ನಾಳ್​, ಬೆಟ್ಟಯ್ಯ, ಜಗದೀಶ್ಚಂದ್ರ, ರವಿಶಂಕರ್​, ಮುಖಂಡರಾದ ಕೋರಿ ಮಂಜುನಾಥ್​, ಚಂದ್ರಶೇಖರ್​, ಶಿವಕುಮಾರ್​, ಹೆಬ್ಬಾಕ ಮಲ್ಲಿಕಾರ್ಜುನ್​, ನಂಜಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net