

ತುಮಕೂರು: ಅಂತರ್ಜಲ ಅತೀ ಬಳಸುವ ರಾಜ್ಯದ 14 ಜಿಲ್ಲೆಯ 41 ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಅಟಲ್ ಭೂಜಲ್ ಯೋಜನೆ’ಗೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ಚಾಲನೆ ನೀಡಿದರು.
ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಂವಹನ ಕೊರತೆಯಿಂದ ರಾಜ್ಯದ ವಿವಿಧೆಡೆಯಲ್ಲಿಯೂ ಆನ್‌ಲೈನ್ ಮೂಲಕ ಸಂಪರ್ಕದಲ್ಲಿದ್ದ ಶಾಸಕರು, ಅಧಿಕಾರಿಗಳಿಗೆ ಕಾರ್ಯಕ್ರಮ ತಲುಪಲೇ ಇಲ್ಲ, ಅವರ ಮಾತುಗಳು ಇಲ್ಲಿದ್ದವರಿಗೆ ಕೇಳಿಸಲೂ ಇಲ್ಲ.
ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಒಬ್ಬರ ಮಾತು ಒಬ್ಬರಿಗೆ ಕೇಳದಂತೆ ನಡೆದ ವಿಡಿಯೋ ಸಂವಾದದಿಂದ ಸಿಟ್ಟಾದ ಸಚಿವ ಜೆ.ಸಿ.ಮಾಧುಸ್ವಾಮಿ ಆಯೋಜಕರ ಮೇಲೆ ಗರಂ ಆದರು. ಸಂವಹನವೇ ಇಲ್ಲದೆ ರಾಜ್ಯದೆಲ್ಲೆಡೆ ಹೇಗೆ ಕಾರ್ಯಕ್ರಮ ತಲುಪಿಸಲು ಸಾಧ್ಯ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಆನ್‌ಲೈನ್ ಮೂಲಕ ಸಮಾರಂಭದಲ್ಲಿ ಭಾಗಿಯಾಗಿದ್ದ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ, ಕಡೂರು ಶಾಸಕ ಬೆಳ್ಳಿಪ್ರಕಾಶ್, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಗಳೂರು ಶಾಸಕ ರಾಮಚಂದ್ರ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ರಾಮದುರ್ಗ ಶಾಸಕ ಮಹದೇವಪ್ಪ ಅವರಿಗೆ ಆರಂಭದಲ್ಲಿಯೇ ಮಾತನಾಡುವಂತೆ ಸಚಿವರು ಮನವಿ ಮಾಡಿಕೊಂಡರೂ ಅವರೆಲ್ಲರ ಮಾತುಗಳು ಸಮಾರಂಭದಲ್ಲಿ ಕೇಳಿಸಲೇ ಇಲ್ಲ, ಮಹತ್ವದ ಕಾರ್ಯಕ್ರಮದ ಬಗ್ಗೆ ಶಾಸಕರ ಅಭಿಪ್ರಾಯ ತಿಳಿಸಲು ಅವಕಾಶವೇ ಆಗಲಿಲ್ಲ.
ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರ ಘೋಷಣೆಯ ಜತೆಗೆ 1200 ಕೋಟಿ ರೂ. ನೀಡಿದ ಹಿನ್ನೆಲೆಯಲ್ಲಿ ಕೆಲಸ ಆರಂಭಿಸಲಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕು ಜೆ.ಸಿ.ಪುರ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಭೂಮಿಯಲ್ಲಿ ಹರಿಯುವ ನೀರನ್ನು ಭೂಮಿಯಲ್ಲಿ ಇಂಗಿಸುವುದು ಹಾಗೂ ಆವಿಯಾಗುವುದನ್ನು ತಪ್ಪಿಸಲು ಅರಣ್ಯೀಕರಣ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.
ತುಮಕೂರು, ಕೊರಟಗೆರೆ, ಮಧುಗಿರಿ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲೂಕುಗಳನ್ನು ಅಂತರ್ಜಲಮಟ್ಟ ಅಧ್ಯಯನ ಹಾಗೂ ಮೌಲೀಕರಣದಿಂದ ಅಂತರ್ಜಲ ಶೋಷಿತ ತಾಲೂಕು ಎಂದು ಗುರುತಿಸಲಾಗಿದ್ದು, ಯೋಜನೆಯಿಂದ ಅನುಕೂಲವಾಗುವ ವಿಶ್ವಾಸವಿದ್ದು, 2019 ಡಿ.25ರಿಂದ ಜಿಲ್ಲೆಯಲ್ಲಿ ಯೋಜನೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಸಿ ಸಿ.ಮೃತ್ಯುಂಜಯ ಸ್ವಾಮಿ, ಯೋಜನಾ ನಿರ್ದೇಶಕ ಎಂ.ರವೀಂದ್ರಪ್ಪ, ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಉಪಾಧ್ಯಕ್ಷೆ ಶಾರದಾ ಇದ್ದರು.
ಯೋಜನೆ ಉದ್ದೇಶ!: ವಿವಿಧ ಕಾರ್ಯಯೋಜನೆ ಮೂಲಕ ಅಂತರ್ಜಲ ಬಳಕೆ ಕಡಿಮೆಗೊಳಿಸಿ ಭೂ ಜಲ ಅಭಿವೃದ್ಧಿ ಮಾಡುವುದು ಮುಖ್ಯ ಉದ್ದೇಶವಾಗಿದೆ. ಬಾವಿ, ಕೊಳವೆ ಬಾವಿ, ನದಿ, ಕೆರೆ, ಕೃಷಿಹೊಂಡ, ಚೆಕ್ ಡ್ಯಾಂ ನಿರ್ಮಾಣ, ಮಳೆ ನೀರು ಸಂಗ್ರಹಣೆ ಮತ್ತು ಸಂರಕ್ಷಣೆ, ಸುಸ್ಥಿರ ಅಂತರ್ಜಲ ನಿರ್ವಹಣೆ, ನೀರಿನ ಮಿತವ್ಯಯ ಬಳಕೆ ಬಗ್ಗೆ ಜನ ಜಾಗೃತಿ, ಜನ-ಜಾನುವಾರುಗಳಿಗೆ ಗುಣಮಟ್ಟದ ನೀರು ಒದಗಿಸುವ, ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸುವ, ಅಂತರ್ಜಲ ಮರುಪೂರೈಕೆ ಮಾಡುವ ಯೋಜನೆಯಿದು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತೀ 2 ವರ್ಷಗಳಿಗೊಮ್ಮೆ ರಾಜ್ಯದ ಅಂತರ್ಜಲ ಸಂಪನ್ಮೂಲದ ಮೌಲೀಕರಣ ಮಾಡಲಾಗುತ್ತಿದೆ. ಮೌಲೀಕರಣವನ್ನು ಅಂತರ್ಜಲ ಅತಿಬಳಕೆ, ಕ್ಲಿಷ್ಟಕರ, ಅರೆಕ್ಲಿಷ್ಟಕರ, ಸುರಕ್ಷಿತ ಎಂದು ವರ್ಗಿಕರಿಸಲಾಗಿದೆ. ಅದರಂತೆ ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತಿಪಟೂರು, ತುಮಕೂರು ತಾಲೂಕು ಅಂತರ್ಜಲ ಅತಿ ಬಳಕೆ, ಶಿರಾ ಕ್ಲಿಷ್ಟಕರ, ಪಾವಗಡ ಅರೆ ಕ್ಲಿಷ್ಟಕರ ಹಾಗೂ ಗುಬ್ಬಿ, ಕುಣಿಗಲ್, ತುರುವೇಕೆರೆ ತಾಲೂಕು ಸುರಕ್ಷಿತ ಎಂದು ವರ್ಗೀಕರಿಸಲಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಗತಿಯ ಬಗ್ಗೆ ವಿಶ್ವಬ್ಯಾಂಕ್ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸಹಕಾರದ ಮೂಲಕ ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮ ಮಾಡೋಣ. ಆರು ಸಮಾನ ಮನಸ್ಕ ಇಲಾಖೆಗಳನ್ನು ಒಳಗೊಂಡು ಯೋಜನೆ ರೂಪಿಸಲಾಗಿದ್ದು, ಪ್ರಾಜೆಕ್ಟ್ ಸಿದ್ಧಪಡಿಸಲಾಗಿದೆ. ವಿಶ್ವಬ್ಯಾಂಕ್ ಕೂಡ ನಮ್ಮ ಯೋಜನೆ ಮೆಚ್ಚಿದೆ, ಪ್ರಪಂಚದಲ್ಲಿಯೇ ಮೆಚ್ಚುಗೆ ಪಡೆಯಲಿದ್ದು ಎಲ್ಲರೂ ಸಹಕಾರ ನೀಡಬೇಕು. ಜೆ.ಸಿ.ಮಾಧುಸ್ವಾಮಿ ಸಣ್ಣ ನೀರಾವರಿ ಸಚಿವ