ಅಟಲ್ ಭೂಜಲ್ ಯಶಸ್ವಿಯಾಗುವ ವಿಶ್ವಾಸ ; ಕೇಂದ್ರ ತಂಡಕ್ಕೆ ಸ್ವಗ್ರಾಮ ಜೆ.ಸಿ.ಪುರದಲ್ಲೇ ಮಾಹಿತಿ ನೀಡಿದ ಸಚಿವ ಮಾಧುಸ್ವಾಮಿ

28TMK_Atal_Bhuja
Published on

ತುಮಕೂರು : ಪ್ರಧಾನಿ ನರೇಂದ್ರಮೋದಿ ಅವರ ಮಹತ್ವಾಕಾಂಕ್ಷಿ ಅಟಲ್ ಭೂಜಲ್ ಯೋಜನೆ ಚಿಕ್ಕನಾಯಕನಹಳ್ಳಿ ತಾಲೂಕು ಜಯಚಾಮರಾಜೇಂದ್ರಪುರ (ಜೆ.ಸಿ.ಪುರ) ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನವಾಗಲಿದ್ದು, ಸಿದ್ಧತೆಗಳ ಬಗ್ಗೆ ಗುರುವಾರ ಪರಿಶೀಲನೆ ನಡೆಸಿದ ಕೇಂದ್ರ ತಂಡ ಮೆಚ್ಚುಗೆ ವ್ಯಕ್ತಪಡಿಸಿತು.

ಯೋಜನಾ ನಿರ್ದೇಶಕ ಡಾ.ನಂದಕುಮಾರನ್, ಗ್ರೂಪ್ ಲೀಡರ್ ಸಿನ್ಹಾ, ರಾಷ್ಟ್ರೀಯ ಕಾರ್ಯಕ್ರಮ ನಿರ್ವಹಣಾ ಘಟಕದ ಸಾಮಾಜಿಕ ಅಭಿವೃದ್ಧಿ ಪರಿಣಿತ ಡಾ.ಕೆ.ಕೆ.ಗೌಲ್ ಅವರಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಖುದ್ದು ಹಾಜರಿದ್ದು ಯೋಜನೆಯ ರೂಪುರೇಷೆಗಳ ಮಾಹಿತಿ ನೀಡಿದರು.

ಜೆ.ಸಿ.ಪುರದಲ್ಲಿ 500 ಕೃಷಿ ಹೊಂಡ, 200 ರೈತರಿಗೆ ನೀರು ಹಾಗೂ ರಸ್ತೆ ಬದಿಯಲ್ಲಿ ಗಿಡ ನೆಡಲು ಆರಂಭದಲ್ಲಿ 9 ಕೋಟಿ ರೂ. ವೆಚ್ಚದ ಕಾರ್ಯಕ್ರಮ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲೆಡೆಯೂ ಕಾರ್ಯಕ್ರಮ ವಿಸ್ತಾರವಾಗಲಿದೆ ಎಂದು ಕೇಂದ್ರದಿಂದ ಆಗಮಿಸಿರುವ ತಂಡಕ್ಕೆ ಸಚಿವರು ಹೇಳಿದರು.

ಯೋಜನಾ ನಿರ್ದೇಶಕ ಡಾ.ನಂದಕುಮಾರನ್ ಮಾತನಾಡಿ, ಯೋಜನೆ ಹೊಣೆ ಹೊತ್ತಿರುವ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರೇ ಗ್ರಾಮೀಣ ಭಾಗದಲ್ಲಿ ವಾಸವಿರುವುದು ಹಾಗೂ ಸಮಸ್ಯೆಗಳ ಬಗ್ಗೆ ಅರಿವಿರುವುದರಿಂದ ಯೋಜನೆ ಪ್ರಾಯೋಗಿಕವಾಗಿ ಯಶಸ್ವಿಯಾಗುವ ವಿಶ್ವಾಸವಿದೆ. ಕರ್ನಾಟಕದ ಕಾರ್ಯಕ್ರಮವೇ ನಮಗೂ ದಾರಿದೀಪವಾಗಿದೆ ಎಂದರು.

ಜೆ.ಸಿ.ಪುರಕ್ಕೆ ಆಗಮಿಸುವುದಕ್ಕೂ ಪೂರ್ವದಲ್ಲಿ ತುಮಕೂರಿನ ಜಿಪಂ ಸಭಾಂಗಣದಲ್ಲಿ ಯೋಜನೆ ಪ್ರಗತಿ ಪರಿಶೀಲನೆ ಮತ್ತು ಸಮಾಲೋಚನಾ ಸಭೆಯಲ್ಲಿ ಜಿಪಂ ಸಿಇಒ ಶುಭಾಕಲ್ಯಾಣ್ ಮಾಹಿತಿ ನೀಡಿ, ಪ್ರಾಯೋಗಿಕವಾಗಿ ಜೆ.ಸಿ.ಪುರ ಗ್ರಾಪಂ ಆಯ್ಕೆ ಮಾಡಿಕೊಳ್ಳಲಾಗಿದೆ, ನಂತರ ಮಧುಗಿರಿ ತಾಲೂಕು ದಬ್ಬೇಘಟ್ಟ ಗ್ರಾಪಂನಲ್ಲಿ ಯೋಜನೆ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಜಲ ಭದ್ರತಾ ಯೋಜನೆಯನ್ನು ರೂಪಿಸಿರುವ ಬಗ್ಗೆ ತೋಟಗಾರಿಕೆ, ಕೃಷಿ ಮತ್ತು ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ತಯಾರಿಸಿರುವ ಯೋಜನಾ ವರದಿಯ ಅನುಸಾರ ಚರ್ಚಿಸಿ ತಂಡ ಮಾಹಿತಿ ಪಡೆಯಿತು.

ಸಪ್ಲೈಡ್ ಸೈಡ್ ಇಂಟರ್‌ವೆಂಕ್ಷನ್ ಡಿಮ್ಯಾಂಡ್ ಸೈಡ್ ಮ್ಯಾನೇಜ್‌ಮೆಂಟ್ ಪದ್ಧತಿ ಅನುಸಾರ ಸಮರ್ಪಕ ಹಾಗೂ ಕಡಿಮೆ ಪ್ರಮಾಣದಲ್ಲಿ ನೀರಿನ ಬಳಕೆಗಾಗಿ ಜೆ.ಸಿ.ಪುರ ಗ್ರಾಪಂನಲ್ಲಿ ಆದ್ಯತೆಗೆ ಅನುಸಾರ ಅನುಷ್ಠಾನ ಮಾಡುತ್ತಿರುವ ಕೃಷಿ ಹೊಂಡ, ಚೆಕ್ ಡ್ಯಾಂ, ಬದು ನಿರ್ಮಾಣ, ಅರಣ್ಯೀಕರಣ ಕಾಮಗಾರಿಗಳ ಬಗ್ಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಅಟಲ್ ಭೂಜಲ್ ಯೋಜನೆ ಬಗ್ಗೆ ವಿಶ್ವಬ್ಯಾಂಕ್ ಮೆಚ್ಚುಗೆ ಸೂಚಿಸಿದೆ, ಅಂತರ್ಜಲ ಅಭಿವೃದ್ಧಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿರುವ ಯೋಜನೆಯನ್ನು ಕರ್ನಾಟಕದಲ್ಲಿ ರೂಪಿಸಲಾಗಿದ್ದು, ಕೇಂದ್ರ ಸರ್ಕಾರ ಮೆಚ್ಚಿ ದೇಶಕ್ಕೆ ವಿಸ್ತರಿಸಲು ಮುಂದಾಗಿರುವುದು ನಮಗೆ ಹೆಮ್ಮೆ. ಸಾರ್ವಜನಿಕರು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಜೆ.ಸಿ.ಮಾಧುಸ್ವಾಮಿ ಸಣ್ಣ ನೀರಾವರಿ ಸಚಿವ

ನೆಲದಲ್ಲಿಯೇ ಕೂತ ಸಚಿವ, ಅಧಿಕಾರಿಗಳು..: ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನವಾಗುತ್ತಿರುವ ಚಿಕ್ಕನಾಯಕನಹಳ್ಳಿ ತಾಲೂಕು ಜಯಚಾಮರಾಜೇಂದ್ರಪುರ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸ್ವಗ್ರಾಮವಾಗಿದ್ದು, ಕೇಂದ್ರದ ಅಧಿಕಾರಿಗಳ ತಂಡವನ್ನು ಸಚಿವರೇ ಸ್ವಾಗತಿಸಿ ಮಾಹಿತಿ ನೀಡಿದರು. ಸಾರ್ವಜನಿಕರ ಜತೆ ಗ್ರಾಮದ ಕಂಬದ ನರಸಿಂಹ ದೇವಾಲಯದಲ್ಲಿ ನೆಲದಲ್ಲಿಯೇ ಕುಳಿತು ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಮಾಹಿತಿ ವಿನಿಮಯ ಮಾಡಿಕೊಂಡರು. ಸಚಿವರೆಂದರೆ ಸೂಟು, ಖುರ್ಚಿ, ಕಾರ್ಯಕ್ರಮ ಎಂದು ಭಾವಿಸಿಕೊಂಡು ಬಂದಿದ್ದ ಕೇಂದ್ರ ತಂಡದ ಅಧಿಕಾರಿಗಳು ಮಾಧುಸ್ವಾಮಿ ಸರಳತೆಗೆ ಆಕರ್ಷಿತರಾದರು. ಯೋಜನೆ ಯಶಸ್ವಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು. ಸಣ್ಣ ನೀರಾವರಿ ಇಲಾಖೆ ಇಇ ರವಿ ಸೂರನ್, ಎಇ ಪ್ರಭಾಕರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net