ಅಜ್ಞಾನಿಗಳಿಂದ ಪಠ್ಯದಲ್ಲಿ ಬದಲಾವಣೆ, ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ, ಸಂವಿಧಾನ ಶಿಲ್ಪಿ ಪದ ತೆಗೆದಿರುವುದಕ್ಕೆ ಬೇಸರ

3
Published on

ಆನೇಕಲ್: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅರಿವಿಲ್ಲದವ ಪಠ್ಯದಲ್ಲಿ ಬದಲಾವಣೆ ತರಲು ಮುಂದಾಗಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಬನ್ನೇರುಘಟ್ಟದಲ್ಲಿ ಭೋವಿ ಸಮಾಜ ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದರು.

ಬಾಬಾ ಸಾಹೇಬರು ಅಸ್ಪೃಶ್ಯತೆ ನಿರ್ಮೂಲನೆಗೆ ಹೋರಾಡಿದರು. ಅವರು ದಲಿತರಿಗೋಸ್ಕರ ಹೋರಾಟ ಮಾಡಲಿಲ್ಲ, ಹಿಂದುಳಿದ ಎಲ್ಲರಿಗೂ ನ್ಯಾಯ ಸಿಗಲಿ ಎಂದು ಸಂವಿಧಾನದಲ್ಲಿ ನ್ಯಾಯ ಕೊಟ್ಟಿದ್ದಾರೆ. ಒಂದು ವೇಳೆ ಅಂಬೇಡ್ಕರ್ ಕರಡು ಸಮಿತಿ ಅಧ್ಯಕ್ಷರಾಗದಿದ್ದರೆ ಸಂವಿಧಾನವೇ ರಚನೆಯಾಗುತ್ತಿರಲಿಲ್ಲ ಎಂದರು.

ಅವನ್ಯಾರೋ ಗಿರಾಕಿ, ಪಠ್ಯ ಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಎನ್ನುವ ಪದವನ್ನೇ ತೆಗೆದು ಹಾಕಿದ್ದಾನೆ. ಆತ ಎಂಥಾ ನೀಚ ಇರಬೇಕು ನೋಡಿ ಎಂದು ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚರಿತ್ರೆಯ ತಪ್ಪುಗಳಾಗದಂತೆ ನೋಡಿಕೊಳ್ಳಿ: ಸಂವಿಧಾನ ಶಿಲ್ಪಿ ರೋಹಿತ್ ಚಕ್ರತೀರ್ಥರೆ, ಎಂಬ ಪ್ರಶ್ನೆ ಎದುರಾಗಿದೆ ಎಂದು ನಿಂದಿಸಿದ ಸಿದ್ದರಾಮಯ್ಯ, ಸಂವಿಧಾನ ಶಿಲ್ಪಿ ಯಾರು ಎಂದು ಕೇಳಿದರೆ ರೋಹಿತ್ ಚಕ್ರ ತೀರ್ಥ ಅಂತ ಹೇಳ್ತೀರಾ ಎಂದು ಪ್ರಶ್ನಿಸಿದರು. ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದು, ಕ್ರೈಸ್ತ, ಮುಸಲ್ಮಾನ ಎನ್ನುವುದಾಗಿ ಕುವೆಂಪು ಹೇಳಿದ್ದಾರೆ. ಆದರೆ ಇವರು ಮಕ್ಕಳಿಗೆ ವಿಷ ಉಣಿಸಲು ಹೊರಟಿದ್ದಾರೆ. ಚರಿತ್ರೆ ಗೊತ್ತಿರದೆ ಚರಿತ್ರೆ ಸೃಷ್ಟಿಸೋಕೆ ಆಗಲ್ಲ. ಚರಿತ್ರೆಯಲ್ಲಿ ಆದ ತಪ್ಪುಗಳನ್ನು ಮತ್ತೆ ಆಗದಂತೆ ನೋಡಿಕೊಳ್ಳಬೇಕು. ಆರ್ಯರು ಮಧ್ಯ ಪ್ರಾಚ್ಯದಿಂದ ಬಂದವರು, ನೀವೆಲ್ಲ ಬಂದಿರಲಿಲ್ಲ. ಸಿದ್ದರಾಮಯ್ಯ ಹಿಂದು ವಿರೋಧಿ, ಆರೆಸ್ಸೆಸ್ ವಿರೋಧಿ ಎನ್ನುತ್ತಾರೆ. ಇರುವುದನ್ನು ಹೇಳಿದಾಗ ಎಲ್ಲರ ವಿರೋಧಿ ಆಗುವ ಸ್ಥಿತಿ ನಿರ್ಮಿಸುತ್ತಿರುವುದು ಯಾರು ಎನ್ನುವುದು ಇಡೀ ದೇಶಕ್ಕೆ ಗೊತ್ತಾಗಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬ್ರಾಹ್ಮಣೇತರರಿಗೆ ಮೊದಲ ಬಾರಿಗೆ ಮೀಸಲಾತಿ ನೀಡಿದಾಗ ವಿರೋಧ ವ್ಯಕ್ತಪಡಿಸಿದರು. ಶೇ. 25 ಬ್ರಾಹ್ಮಣರಿಗೆ, ಶೇ.75 ಇತರ ವರ್ಗವರಿಗೆ ಎಂದು ಮಿಲ್ಲರ್ ಕಮಿಷನ್ ವರದಿ ನೀಡಿತ್ತು ಎಂದರು.

ಪ್ರಾಮಾಣಿಕ ಜನರು: ಭೋವಿ ಸಮುದಾಯದವರು ಬಹಳ ಪ್ರಾಮಾಣಿಕರು. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಎಲ್ಲ ಚುನಾವಣೆಯಲ್ಲೂ ನನ್ನ ಪರವಾಗಿ ನಿಂತಿದ್ದಾರೆ. ಭೋವಿ ಜನಾಂಗಕ್ಕೆ ಮಂಜೂರು ಮಾಡಿದ್ದ ಎರಡು ಎಕರೆ ಜಮೀನನ್ನು ಈ ಸರ್ಕಾರ ಕೊಟ್ಟೇ ಇಲ್ಲ, ಅದರ ಮೇಲೆ ಜಮೀನ್ದಾರರು ಕೇಸ್ ಹಾಕಿದ್ದಾರೆ. ಸರ್ಕಾರ ಉತ್ತಮ ವಕೀಲರನ್ನು ನೇಮಿಸಿ ಸಮಸ್ಯೆ ಪರಿಹರಿಸಬಹುದಿತ್ತು. ಇಪ್ಪತ್ತು ಕೋಟಿ ರೂ. ಬೆಲೆ ಬಾಳುವ ಜಾಗ ಅದು, ಕುಮಾರಸ್ವಾಮಿಯೂ ಮಾಡಿಕೊಡಲಿಲ್ಲ, ಯಡಿಯೂರಪ್ಪ ಮಾಡಿಕೊಡಲಿಲ್ಲ, ಬಸವರಾಜ ಬೊಮ್ಮಾಯಿನೂ ಮಾಡಿಕೊಡಲಿಲ್ಲ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ಇನ್ನೂ ನೇಮಿಸಿಲ್ಲ ಎಂದ ಸಿದ್ದರಾಮಯ್ಯ, ಅದಕ್ಕೇ ನಿನ್ನ ಮಂತ್ರಿ ಮಾಡಿದ್ದು, ಅದಕ್ಕೆ ನೀನು ಬಟ್ಟೆಯೆಲ್ಲ ಹರಿದುಕೊಂಡಿದ್ದೆ ಎಂದು ಗೂಳಿಹಟ್ಟಿ ಶೇಖರ್‌ಗೆ ಕಿಚಾಯಿಸಿದರು. ನಿನ್ನನ್ನ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷನನ್ನಾಗಿ ಮಾಡಬಹುದಿತ್ತು, ಯಾಕೋ ಮಾಡಿಲ್ಲ ಎಂದು ಪ್ರಶ್ನಿಸಿದರು.

ಯಾರು ಬಿ ಟೀಂ?: ನಾವು ರಾಜಕಾರಣ ಮಾಡಿದರೆ ಬೆಜೆಪಿಯ ಬಿ ಟೀಂ ಆಗಿಬಿಡ್ತೀವಿ. ಆದರೆ ಜೆಡಿಎಸ್ ನಮಗೆ ಏಕೆ ಬೆಂಬಲ ನೀಡಲಿಲ್ಲ. ರಾಜ್ಯಸಭೆಗೆ ಮೊದಲು ಅಭ್ಯರ್ಥಿಯನ್ನು ಹಾಕಿದ್ದು ನಾವು. ಅದರ ಮರುದಿನ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಹಾಕಿದರು. ಅವರು ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ ಏಕೆ ಹಾಕಿದ್ದರು ಎಂದು ಜೆಡಿಎಸ್ ಮುಖಂಡರೇ ಹೇಳಬೇಕು. ನಮಗೆ ಸಪೋರ್ಟ್ ಮಾಡಿದ್ದರೆ ನಾವು ಗೆಲ್ಲುತ್ತಿದ್ದೆವು. ಯಾರು ಬಿ ಟೀಂ ನಾವಾ, ಅವರಾ ಎನ್ನುವುದು ಜನರಿಗೆ ಗೊತ್ತಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯಸಭೆಗೆ ದೇವೇಗೌಡರು ಚುನಾವಣೆಗೆ ನಿಂತಿದ್ದ ವೇಳೆ ನಾವು ಅಭ್ಯರ್ಥಿ ಹಾಕಿರಲಿಲ್ಲ. ನಾವು 80 ಜನ ಶಾಸಕರಿದ್ದೆವು. ಕುಮಾರಸ್ವಾಮಿಗೆ 37 ಜನ ಇದ್ದರು. ಆದರೂ ನಾವು ದೇವೆಗೌಡರನ್ನು ರಾಜ್ಯಸಭೆಗೆ ಕಳಿಸಿದೆವು ಎಂದರೆ ಬಿಜೆಪಿ ಬರಬಾರದು ಕೋಮುವಾದಿ ಪಕ್ಷವನ್ನು ದೂರವಿರಬೇಕು ಎನ್ನುವ ಕಾರಣಕ್ಕಾಗಿ ಎಂದು ಸ್ಪಷ್ಟ ಪಡಿಸಿದರು.

ಸಂಸದ ಡಿ.ಕೆ ಸುರೇಶ್ ಮಾತನಾಡಿ, ಭೋವಿ ಸಮಾಜ ಅಣೆಕಟ್ಟು ಸಹಿತ ಮನೆ ತಳಹದಿ ನಿರ್ಮಾಣ ಮಾಡುವವರಿಗೆ ಶ್ರಮಿಸಿದ ಶ್ರಮಜೀವಿಗಳು, ಇತರ ಸಮಾಜದಲ್ಲೇ ಭೂಮಿ ಸಮಾಜವನ್ನು ಎಲ್ಲರೂ ಗೌರವಿಸಬೇಕು, ನಾರಾಯಣಗುರು, ಪೆರಿಯಾರ್, ಕುವೆಂಪು ಅವರ ವಿಚಾರಗಳನ್ನು ಪಠ್ಯಪುಸ್ತಕದಿಂದ ತೆಗೆಯುವ ಮೂಲಕ ಧರ್ಮ ವಿರೋಧಿ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಶಿವರಾಜ ತಂಗಡಗಿ, ಭೋವಿ ಸಂಘರ್ಷ ಸಮಿತಿ ಅಧ್ಯಕ್ಷ ಗೌತಮ್ ವೆಂಕಿ, ಕಾಂಗ್ರೆಸ್ ಮುಖಂಡರಾದ ಆರ್.ಕೆ ರಮೇಶ್, ರಾಜಗೋಪಾಲ ರೆಡ್ಡಿ, ಸುಷ್ಮಾ ರಾಜಗೋಪಾಲ ರೆಡ್ಡಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net