

ನಾಪೋಕ್ಲು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ನಾಪೋಕ್ಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಅಜ್ಜಿಮುಟ್ಟ ಪಳ್ಳಿರಾಣೆ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು.
ಕಳೆದ ಎರಡು ಮೂರು ವರ್ಷಗಳಿಂದ ಇಲ್ಲಿನ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನೀರಿನ ಟ್ಯಾಂಕ್ ಇದ್ದರೂ ನೀರು ಸರಬರಾಜು ಆಗುತ್ತಿಲ್ಲ. ಪ್ರಧಾನಮಂತ್ರಿಗಳ ಜಲಜೀವನ್ ಮಿಷನ್ ಯೋಜನೆ ಸಮರ್ಪಕವಾಗಿ ಜಾರಿಯಾಗದ ಪರಿಣಾಮ ಕುಡಿಯುವ ನೀರಿಗಾಗಿ ಸಮೀಪದ ಮಸೀದಿಯ ಬಳಿಯ ಕೊಳವೆ ಬಾವಿ ಅವಲಂಬಿಸುವಂತಾಗಿದೆ. ನಿತ್ಯವೂ ದೂರದ ಹೊಳೆ ನೀರನ್ನು ಆಶ್ರಯಿಸುವ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಬೇಸಿಗೆ ಹಿನ್ನೆಲೆ ನೀರಿನ ಸಮಸ್ಯೆ ಹೆಚ್ಚಿದ್ದು, ಜನರು ಸುಡುಬಿಸಿನಲ್ಲಿ ನೀರಿಗಾಗಿ ಪರಿತಪಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಪಳ್ಳಿರಾಣೆಗೆ ತುರ್ತಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು. ಹದಗೆಟ್ಟಿರುವ ಇಲ್ಲಿನ ರಸ್ತೆಯನ್ನು ದುರಸ್ತಿಪಡಿಸಬೇಕು. ತಪ್ಪಿದಲ್ಲಿ ಮತದಾನ ಬಹಿಷ್ಕರಿಸಿ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.
ಗ್ರಾಮಸ್ಥರಾದ ಮಂದಪಂಡ ಮೊಣ್ಣಪ್ಪ, ಇಬ್ರಾಹಿಂ.ಪಿ.ಬಿ, ನಬೀಸಾ, ಫೇಮೀನಾ, ಸುಲೇಮಾನ್ ಸುಬೇರ್, ಮಿಥುನ್. ರಾಜೀವ್, ಹನೀಫ.ಎಂ.ಎ, ಮ್ಯೂದು ಎಂ.ಎ, ಸೂಫಿ, ರಘು ಇತರರಿದ್ದರು.