

ತರೀಕೆರೆ: ಅಜ್ಜಂಪುರ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನ.30 ರಂದು ನಡೆಯಲಿರುವ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ರಾಜ್ಯೋತ್ಸವ ಪುರಸ್ಕೃತ ಮಂಜುನಾಥ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಅಜ್ಜಂಪುರದಲ್ಲಿ ತಾಲೂಕು ಕಸಾಪದಿಂದ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಿವೃತ್ತ ನೌಕರ ಮಂಜುನಾಥ್ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅವರಿಗೆ 2021ನೇ ಸಾಲಿನಲ್ಲಿ ಸಾಹಿತ್ಯ ವಿಭಾಗದಲ್ಲಿನ ಸೇವೆ ಪರಿಗಣಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈವರೆಗೆ 20ಕ್ಕೂ ಹೆಚ್ಚು ಗ್ರಂಥಗಳ ಸಂಪಾದನೆ ಜತೆ ವಿವಿಧ ಕೃತಿ ರಚಿಸಿದ್ದಾರೆ ಎಂದರು.
ರಾಷ್ಟ್ರೀಯ, ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಮಂಜುನಾಥ್ ಅವರ ಸಂಶೋಧನಾ ಲೇಖನ, 1,500ಕ್ಕೂ ಹೆಚ್ಚು ಅಂಕಣ, ಲೇಖನ ಕತೆ, ಪ್ರಬಂಧಗಳು ಪ್ರಕಟವಾಗಿವೆ. ಅವರ ಆಯ್ಕೆಯಿಂದ ಸಮ್ಮೇಳನದ ಘನತೆ ಹೆಚ್ಚಿದೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ, ಗೌರವಾಧ್ಯಕ್ಷ ಎ.ಸಿ.ಚಂದ್ರಪ್ಪ, ಕಾರ್ಯದರ್ಶಿ ಕಾಂತೇಶ್, ಕೋಶಾಧ್ಯಕ್ಷ ಎನ್.ವೆಂಕಟೇಶ್, ಸದಸ್ಯರಾದ ಮಹಾವೀರ್ ಜೈನ್, ಮೋಹನ್‌ರಾವ್, ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಮ್ಮ, ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಧುಮಾಲತಿ ಮತ್ತಿತರರಿದ್ದರು.