

ತರೀಕೆರೆ: ಅಜ್ಜಂಪುರ ಪಟ್ಟಣ ಪಂಚಾಯಿತಿ 11 ವಾರ್ಡ್‌ಗಳಿಗೆ ಆ.17ರಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ವಿನಾಯಕ್ ಸಾಗರ್ ತಿಳಿಸಿದರು.
ಅಜ್ಜಂಪುರ ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಮುಖರ ಸಮ್ಮುಖದಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿ, ನಾಲ್ಕು ವರ್ಷಗಳಿಂದ ಪಟ್ಟಣ ಪಂಚಾಯಿತಿಗೆ ತಾಂತ್ರಿಕ ಕಾರಣಗಳಿಂದ ಚುನಾವಣೆ ನಡೆದಿರಲಿಲ್ಲ. ಚುನಾವಣಾ ಆಯೋಗ ಅಜ್ಜಂಪುರ ಪಪಂ 11 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ದಿನ ನಿಗದಿಮಾಡಿದೆ ಎಂದರು.
ನಿಯಮಾನುಸಾರ ವಾರ್ಡ್‌ಗಳ ವಿಂಗಡಣೆಗೊಳಿಸಿ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದ್ದು, ಪರಿಷ್ಕರಣೆ ಕುರಿತಾದ ಯಾವುದೇ ಆಕ್ಷೇಪಣೆ ಸಲ್ಲಿಸಲು ಜು.19ರಿಂದ 22ರವರೆಗೆ ಅವಕಾಶ ಕಲ್ಪಿಸಿದೆ. ವಾರ್ಡ್‌ನಲ್ಲಿ ಮನೆ ನಿರ್ಮಿಸಿಕೊಂಡು ವಾಸವಿರುವ ಮತದಾರರಿಗೆ ಅದೇ ವಾರ್ಡ್‌ನ ಮತಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಹಕ್ಕು ಚಲಾಯಿಸಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. 18 ವರ್ಷ ತುಂಬಿದವರು ಅಗತ್ಯ ದಾಖಲೆ ಸಲ್ಲಿಸಿ ಮತಪಟ್ಟಿಯಲ್ಲಿ ಸೇರ್ಪಡೆಗೊಳ್ಳಬಹುದಲ್ಲದೆ, ಈ ಬಾರಿಯ ಚುನಾವಣೆಯಲ್ಲಿ ಹಕ್ಕು ಚಲಾಯಿಸಬಹುದು ಎಂದು ಮಾಹಿತಿ ನೀಡಿದರು.
ತಾಪಂ ಇಒ ಎಂ.ಕೆ.ವಿಜಯಕುಮಾರ್, ಪಿಡಿಒ ಸುರೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಶಿವಾನಂದ್, ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಶ್ ಮಡಿವಾಳ್, ಬಿಜೆಪಿ ಅಧ್ಯಕ್ಷ ಸಿ.ಎಸ್.ಸಿದ್ದೇಗೌಡ ಮತ್ತಿತರರಿದ್ದರು.