ಅಜಾಗರೂಕತೆ ಕಂಡುಬಂದರೆ ಕ್ರಮ

Kudligi MLA visit to hospital
ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಡಾ.ಶಂಕರನಾಯ್ಕ, ಡಾ.ಎಸ್.ಪಿ.ಪ್ರದೀಪ್ ಕುಮಾರ್, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಇದ್ದರು.
Published on

ಕೂಡ್ಲಿಗಿ: ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಈ ಕೂಡಲೇ ಸ್ವಚ್ಛತೆಗೆ ಕ್ರಮ ವಹಿಸಬೇಕೆಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾನುವಾರ ತಡರಾತ್ರಿ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ತೊಂದರೆಯಾಗಿತ್ತು ಎನ್ನುವ ವಿಡಿಯೋ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಇಲ್ಲವಾ ಅಥವಾ ಸಿಬ್ಬಂದಿ ಅಜಾಗರೂಕತೆಯೇ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಮಧು ಅವರನ್ನು ಪ್ರಶ್ನಿಸಿದರು.

ರಾತ್ರಿ ಕರ್ತವ್ಯದಲ್ಲಿದ ವೈದ್ಯ ರವಿ ಕುಮಾರ್ ಹಾಗೂ ಸಿಬ್ಬಂದಿ ಮಾತನಾಡಿ, ಭಾನುವಾರ ತಡರಾತ್ರಿ ಮೂರು ಹೆರಿಗೆ ಆಗಿದ್ದು, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಸೂತಿ ಕೊಠಡಿಗಳಲ್ಲಿ ವಿದ್ಯುತ್ ವ್ಯತ್ಯಯ ಆಗಿಲ್ಲ ಎಂದು ಹೇಳಿದರು. ಹಾಗಿದ್ದರೆ ವಿಡಿಯೋ ಮಾಡಿದವರ ಬಗ್ಗೆ ಮಾಹಿತಿ ಕಲೆಹಾಕಿ ತಪ್ಪಿದ್ದರೆ ಅವರ ವಿರುದ್ದ ಕಾನೂನು ಕ್ರಮ ವಹಿಸಲಾಗುವುದು.

ಆಸ್ಪತ್ರೆ ಸಿಬ್ಬಂದಿ ತಪ್ಪು ಕಂಡುಬಂದಲ್ಲಿ ನಿಮ್ಮ ವಿರುದ್ಧ ಕ್ರಮ ವಹಿಸಲಾಗುವುದು ಎಂದರು. ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ನೀಡುವ ಆಹಾರ ಅತ್ಯಂತ ಕಳಪೆಯಾಗಿರುತ್ತದೆ ಈ ಬಗ್ಗೆ ಅಧೀಕ್ಷಕರು ಗಮನ ಹರಿಸಬೇಕು ಎಂದು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ ತಿಳಿಸಿದರು. ಈ ಬಗ್ಗೆ ಅನೇಕ ಬಾರಿ ತಿಳಿಸಿದ್ದು ಸಂಬಂಧಿಸಿದ ಸಿಬ್ಬಂದಿ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net