

ಬಾಗೇಪಲ್ಲಿ : ಕೇಂದ್ರ ಸರ್ಕಾರವು ಎಲ್ಲಿ ಅಚ್ಛೇದಿನ್ ತಂದಿದೆ. ಬಡವರನ್ನು ಕಡೆಗಣಿಸಿರುವುದರ ಜತೆಗೆ ದೇಶವನ್ನು ಹಾಳು ಮಾಡುತ್ತಿದೆ ಎಂದು ಮಾಜಿ ಮುಖ್ಯಮುಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಪಟ್ಟಣದ ಶಾದಿ ಮಹಲ್ ಆವರಣದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ಬುಧವಾರ ಆಯೋಜಿಸಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರೊನಾ ಸೋಂಕಿನಿಂದ ದೇಶದ ಜನರು ತತ್ತರಿಸುವ ಸಂದರ್ಭದಲ್ಲಿ ನರೇಂದ್ರ ಮೋದಿ ವಿದೇಶಗಳಿಗೆ ಲಸಿಕೆ ಪೂರೈಸಿ, ಇಲ್ಲಿ ಕೊರತೆಯ ವಾತಾವರಣ ನಿರ್ಮಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ಅಚ್ಛೇದಿನ್ ಬರುತ್ತದೆ ಎನ್ನಲಾಗಿತ್ತು. ಆದರೆ, ಈಗ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಎಷ್ಟು? ನಿರುದ್ಯೋಗ ಸಮಸ್ಯೆಯ ನಡುವೆ ಪಕೋಡಾ ಮಾರಿ ಎಂದವರೇ ಅಡುಗೆ ಎಣ್ಣೆ ದುಬಾರಿಯಾಗಿ, ಅದನ್ನು ಸಹ ಕೈಗೊಳ್ಳಲು ಸಾಧ್ಯವಾಗದಂತಹ ದುಸ್ಥಿತಿಗೆ ತಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಕರೊನಾ ನಿಯಂತ್ರಣದ ಬದಲಿಗೆ ಚಪ್ಪಾಳೆ ಮತ್ತು ಜಾಗಟೆ ಬಾರಿಸಿ, ದೀಪ ಹಚ್ಚಿ ಎಂದ ಮೊದಲ ಪ್ರಧಾನಿ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ನಾಯಕರನ್ನು ಕಂಡಿಲ್ಲ. ಇಂತಹ ಆಡಳಿತ ಅಗತ್ಯವಿದೆಯೇ?. ಈಗಾಗಲೇ ಜನರು ಕೋಪದಲ್ಲಿದ್ದಾರೆ. ಆದರೆ, ಇದನ್ನು ಚುನಾವಣೆಯಲ್ಲಿ ಮತ ಹಾಕುವ ಸಂದರ್ಭದಲ್ಲಿ ತೋರಿಸಬೇಕು. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಎಂದರು.
ಬಹುತೇಕ ಎಲ್ಲೆಡೆ ಲಸಿಕಾ ಕೇಂದ್ರಗಳು ಬಾಗಿಲು ಮುಚ್ಚಿವೆ. ಕೊರತೆಯ ನೆಪದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬಂದ ಜನರನ್ನು ವಾಪಸ್ ಕಳುಹಿಸಲಾಗುತ್ತಿದೆ. ರಾಜ್ಯದಲ್ಲಿ ವಿಧಾನಸಭಾ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೇ ಲಸಿಕೆ ಸಿಕ್ಕಿಲ್ಲ. ಇಷ್ಟಾದರೂ ಯಡಿಯೂರಪ್ಪ ನಿದ್ದೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕರೊನಾ ಪರಿಹಾರ ಹಣವು ಸಮರ್ಪಕವಾಗಿ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂ. ಬ್ಯಾಂಕ್ ಖಾತೆಗೆ ಜಮಾಗೊಳಿಸಬೇಕೆಂಬ ಸಲಹೆಗೆ ರಾಜ್ಯ ಸರ್ಕಾರ ಕಿವಿಗೊಟ್ಟಿಲ್ಲ. ಬದಲಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆಯ ಪಡಿತರ ಅಕ್ಕಿ ಕಡಿತಗೊಳಿಸಿದೆ. ಬಡವರಿಗೆ ನೆರವು ಒದಗಿಸಲು ಹಣವಿಲ್ಲ. ಆದರೆ, ಜೆಸಿಬಿಯಲ್ಲಿ ಮಣ್ಣು ಅಗೆಯುವಂತೆ ಅನುದಾನ ಬಾಚಲಾಗುತ್ತಿದೆ. ಇಂತಹ ಕೆಟ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕರೊನಾ ಸಂದರ್ಭದಲ್ಲಿ ಬಹಳಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ಸಮಸ್ಯೆಗಳಿಗೆ ಬಿಜೆಪಿ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ. ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಸೂಕ್ತ ಬೆಲೆ ತೆರುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ, ಶಾಸಕರಾದ ಎನ್.ಎಚ್.ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ, ಪುರಸಭೆ ಅಧ್ಯಕ್ಷೆ ಗುಲ್ನಾಜ್‌ಬೇಗಂ, ಉಪಾಧ್ಯಕ್ಷ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡ, ಮುಖಂಡ ವಿನಯ್ ಶ್ಯಾಮ್, ಅಮರನಾಥರೆಡ್ಡಿ ಮತ್ತಿತರರು ಇದ್ದರು.