ಅಚ್ಚುಮನೆ ಕಾರ್ಯ ಮೆಚ್ಚಿಕೊಂಡ ವಿದ್ಯಾರ್ಥಿಗಳು: ವಿಜಯವಾಣಿ ಪತ್ರಿಕೆ ಮುದ್ರಣಾಲಯಕ್ಕೆ ಭಾರತೀ ಕಾಲೇಜಿನ ಮಕ್ಕಳು ಭೇಟಿ

mysore
Published on

 ಮೈಸೂರು: ನಂ.1 ಕನ್ನಡದ ದಿನಪತ್ರಿಕೆ ‘ವಿಜಯವಾಣಿ’ ಮುದ್ರಣಾಲಯಕ್ಕೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಭಾರತೀ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಭೇಟಿ ನೀಡಿ, ಅಚ್ಚುಮನೆಯ ಕಾರ್ಯವೈಖರಿಯನ್ನು ಕುತೂಹಲದಿಂದ ವೀಕ್ಷಿಸಿದರು.

ಮೈಸೂರು ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿರುವ ಮುದ್ರಣಾಲಯಕ್ಕೆ 2ನೇ ವರ್ಷದ ಎಂ.ಕಾಂ.ನ 29 ವಿದ್ಯಾರ್ಥಿಗಳು ಮತ್ತು ಅವರೊಂದಿಗೆ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಟಿ.ಗಣೇಶ್ ಭೇಟಿ ಕೊಟ್ಟಿದ್ದರು. ಇವರೆಲ್ಲರೂ ಉತ್ಸಾಹ, ಕೌತಕದಿಂದ ಪ್ರವೇಶಿಸಿ ಸಂಭ್ರಮಿಸಿದರು. ಇವರ ಭೇಟಿ ಸಂದರ್ಭದಲ್ಲಿ ನಡೆಯುತ್ತಿದ್ದ ವಿಜಯವಾಣಿಯ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ಮುದ್ರಿಸುವ ಪ್ರಕ್ರಿಯೆಯನ್ನು ಸಮೀಪದಿಂದ ನೋಡಿದರು.

ಪತ್ರಿಕೆ ಮುದ್ರಣಕ್ಕೆ ಮುನ್ನ ನಡೆಯುವ ಪ್ಲೇಟ್ ತಯಾರಿಕೆ, ಕಲರ್ ಕಾಂಬಿನೇಷನ್...ಹೀಗೆ ವಿವಿಧ ಪೂರ್ವಸಿದ್ಧತೆಯ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲಿದ್ದ ಸಿಬ್ಬಂದಿ, ತಾಂತ್ರಿಕ ಪರಿಣಿತರು ಸಿದ್ಧತೆಯನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಮುದ್ರಣ ಪ್ರಕ್ರಿಯೆ ಪ್ರತಿಯೊಂದು ಹಂತವನ್ನು ಇವರೆಲ್ಲರೂ ಕಣ್ತುಂಬಿಕೊಂಡರು.

ಸಂಪಾದಕೀಯ ವಿಭಾಗದಲ್ಲಿರುವ ಉಪಸಂಪಾದಕರು, ವಿವಿಧ ಊರುಗಳಿಂದ ವರದಿಗಾರರು ಕಳುಹಿಸಿಕೊಡುವ ಸುದ್ದಿಯನ್ನು ಪರಿಶೀಲಿಸಿ, ಸೂಕ್ತ ಶೀರ್ಷಿಕೆ ಕೊಟ್ಟು, ವಿನ್ಯಾಸ ಮಾಡಿ ಮುದ್ರಣಾಲಯಕ್ಕೆ ಕಳುಹಿಸಿಕೊಟ್ಟ ಪಿಡಿಎಫ್ ಪುಟವನ್ನು ವಿದ್ಯಾರ್ಥಿಗಳು ಗಮನಿಸಿದರು. ಬಹಳ ಕಾತರ ಹೊಂದಿದ್ದ ವಿದ್ಯಾರ್ಥಿಗಳು ಸಣ್ಣಪುಟ್ಟ ಮಾಹಿತಿಯನ್ನೂ ಕೇಳಿ ಪಡೆದುಕೊಂಡರು, ಅದನ್ನು ಬರೆದುಕೊಂಡರು. ಶರವೇಗದಲ್ಲಿ ನಡೆಯುತ್ತಿದ್ದ ನೂರಾರು ಪ್ರತಿಗಳ ಮುದ್ರಣವನ್ನು ಕೆಲ ವಿದ್ಯಾರ್ಥಿಗಳು ವಿಡಿಯೋ, ಫೋಟೋಗಳ ಮೂಲಕ ಸೆರೆ ಹಿಡಿದುಕೊಂಡರು.

ಟಿವಿ, ಸಿನಿಮಾದಲ್ಲಿ ಮುದ್ರಣಾಲಯವನ್ನು ನೋಡಿದ್ದ ಇವರೆಲ್ಲರಿಗೂ ಇದನ್ನು ಖುದ್ದು ನೋಡುವ ಮೊದಲ ಅನುಭವವಾಗಿತ್ತು. ಆಧುನಿಕ ಪ್ರೆಸ್ ಅನ್ನು ಕಂಡು ಬೆರಗಾದರು.

ವಿಜಯವಾಣಿಯಲ್ಲಿ ಪ್ರಕಟವಾಗುವ ಸುದ್ದಿಗಳು, ಲೇಖನ, ಅಂಕಣಗಳನ್ನು ಓದುವ ಮೂಲಕ ಅನೇಕ ವಿಷಯಗಳನ್ನು ತಿಳಿದುಕೊಂಡಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದರು. ರಾಜಕೀಯ, ಅಪರಾಧ ಸುದ್ದಿಗಳಿಲ್ಲದ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆಯನ್ನು ಓದುತ್ತಿರುವುದರಿಂದ ಆಗಿರುವ ಅನುಕೂಲಗಳು, ಕಲಿಕೆಯಲ್ಲಿ ಉಂಟಾಗಿರುವ ಪ್ರಗತಿಯನ್ನೂ ವಿದ್ಯಾರ್ಥಿಗಳು ಹಂಚಿಕೊಂಡರು.

ಹಿಂದೆ ಕಪ್ಪು-ಬಿಳುಪಿನ ಪತ್ರಿಕೆಗಳಿದ್ದವು. ಇದೀಗ ಕಲರ್ ಪತ್ರಿಕೆಗಳ ಯುಗ. ಅದರ ಭಾಗವಾಗಿ ವಿಜಯವಾಣಿಯ ಪ್ರಿಂಟಿಂಗ್ ಪ್ರೆಸ್‌ಗೆ ಬಂದು ನೋಡಿದಾಗಲೇ ಮುದ್ರಣ, ಪತ್ರಿಕೆ ಹಿಂದಿನ ಶ್ರಮ ಅರಿವಿಗೆ ಬಂತು. ಇದು ನಿಜಕ್ಕೂ ಸವಾಲಿನ ಕೆಲಸ. ವಿಜಯವಾಣಿ ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಎಲ್ಲ ಪತ್ರಿಕೆಗಳಿಗಿಂತ ವಿಜಯವಾಣಿ ಸೊಗಸಾಗಿ ಬರುತ್ತಿದೆ. ಅದರಲ್ಲೂ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ಚಿಣ್ಣರಿಂದ ಹಿಡಿದು ಸ್ನಾತಕ ಪದವೀಧರರಿಗೆ ಬಹಳಷ್ಟು ಉಪಯುಕ್ತವಾಗಿದೆ. ಸಾಮಾನ್ಯ ಜ್ಞಾನ, ಪಠ್ಯಕ್ರಮಕ್ಕೆ ಪೂರಕವಾದ ವಿಷಯಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲಕರವಾದ ಸುದ್ದಿಗಳಿರುತ್ತವೆ. ಇದು ಕಲಿಕೆಗೆ ನೆರವಾಗುತ್ತಿದೆ. ಪ್ರತಿಯೊಬ್ಬರೂ ಪತ್ರಿಕೆ ಓದಬೇಕು. ಇದರಿಂದ ಜ್ಞಾನದೊಂದಿಗೆ ಏಕಾಗ್ರತೆ ಬರುತ್ತದೆ. ಡಾ.ಕೆ.ಟಿ.ಗಣೇಶ್ ಸಹಾಯಕ ಪ್ರಾಧ್ಯಾಪಕ, ಭಾರತೀ ಕಾಲೇಜು ‘ವಿಜಯವಾಣಿ’ ಮುದ್ರಣಾಲಯಕ್ಕೆ ಭೇಟಿ ನೀಡಿದ್ದು ಸಂತೋಷ ಕೊಟ್ಟಿದೆ. ಪತ್ರಿಕೆ ಮುದ್ರಣದ ಕುರಿತು ಕೇಳಿದ್ದವು. ಆದರೆ ನೋಡಿರಲಿಲ್ಲ. ಇದನ್ನು ಖುದ್ದಾಗಿ ವೀಕ್ಷಿಸಿದ್ದರಿಂದ ಉತ್ತಮ ಅನುಭವ ಕೊಟ್ಟಿದೆ. ನಮ್ಮ ಕಾಲೇಜಿಗೆ ‘ವಿದ್ಯಾರ್ಥಿಮಿತ್ರ’ ಪತ್ರಿಕೆ ಬರುತ್ತದೆ. ಅದನ್ನು ನಾವುಗಳೆಲ್ಲ ನಿತ್ಯ ಓದುತ್ತೇವೆ. ಇಂದು ಅದನ್ನು ಮುದ್ರಿಸುವುದನ್ನು ನೋಡಿದ್ದೇವೆ. ವಿ.ಆರ್.ಶಿವನಂಜು ವಿದ್ಯಾರ್ಥಿ ‘ವಿದ್ಯಾರ್ಥಿಮಿತ್ರ’ ಬಹಳಷ್ಟು ಉಪಯುಕ್ತ ವಿದ್ಯಾರ್ಥಿಗಳ ಪತ್ರಿಕೆ. ಪ್ರಸಕ್ತ ವಿದ್ಯಮಾನದೊಂದಿಗೆ ಕಲಿಕೆಗೆ ಪೂರಕವಾದ ಅಂಶಗಳು, ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಬಹಳಷ್ಟು ಸುದ್ದಿಗಳು ಇರುತ್ತದೆ. ಇದು ವಿದ್ಯಾರ್ಥಿಗಳ ಕಲಿಕೆ ಸುಧಾರಣೆಗೆ ಇನ್ನಷ್ಟು ಸಹಕಾರಿಯಾಗಿದೆ. ಪತ್ರಿಕೆ ಗುಣಮಟ್ಟ ಸಹ ಉತ್ತಮವಾಗಿದೆ. ನೋಡಲು, ಓದಲು ಹಿತಕಾರಿಯಾಗಿದೆ. ಟಿ.ಜೆ. ಮೋನಿಕಾ ವಿದ್ಯಾರ್ಥಿನಿ ಕ್ಲಾಸ್ ರೂಂನಲ್ಲಿ ಕುಳಿತು ಕೇಳಿದಾಗ ಪತ್ರಿಕೆಗಳ ಮುದ್ರಣದ ಕುರಿತು ಅಷ್ಟಾಗಿ ಗೊತ್ತಾಗಲಿಲ್ಲ. ಇಲ್ಲಿಗೆ ಖುದ್ದಾಗಿ ಬಂದು ನೋಡಿದ್ದರಿಂದ ಅನೇಕ ವಿಷಯಗಳನ್ನು ತಿಳಿದುಕೊಂಡಿರುವೆ. ಇಲ್ಲಿ ಮುದ್ರಣಾಲಯ ಆಧುನಿಕವಾಗಿ ಉತ್ತಮ ವ್ಯವಸ್ಥೆಯನ್ನು ಹೊಂದಿದೆ. ನಮ್ಮ ಕಲ್ಪನೆಗಿಂತ ಮುದ್ರಣ ಯಂತ್ರಗಳು ದೊಡ್ಡದಾಗಿದೆ. ಬಿ.ಅರ್ಪಿತಾ ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net