

ಬೆಳಗಾವಿ: ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ)ವು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ವರ್ಷಗಳಿಂದ ಸವಳು-ಜವಳು, ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗಳು ಇನ್ನೂ ಅನುಷ್ಠಾನ ಹಂತದಲ್ಲಿಯೇ ಉಳಿದಿವೆ.
ಪ್ರತಿವರ್ಷ ನೂರಾರು ಕೋಟಿ ರೂ. ಮೊತ್ತದ ಯೋಜನೆ ಅನುಷ್ಠಾನಗೊಳಿಸುವ ಪ್ರಾಧಿಕಾರವು ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ 19 ತಾಲೂಕುಗಳ ಮಲಪ್ರಭಾ, ಘಟಪ್ರಭಾ, ಹಿಪ್ಪರಗಿ ಮತ್ತು ದೂಧಗಂಗಾ ಯೋಜನಾ ವ್ಯಾಪ್ತಿಯಲ್ಲಿ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿ ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತಿದೆ. ಆದರೆ, ಕಳೆದ ಎರಡು ವರ್ಷದಿಂದ ಅತಿವೃಷ್ಟಿ, ಕೋವಿಡ್-19 ಇತರ ಕಾರಣಗಳಿಂದ ಕಾಡಾಕ್ಕೆ ಅನುದಾನ ಬಿಡುಗಡೆ ಆಗಿಲ್ಲ.
ಆರಂಭಗೊಳ್ಳದ ಕಾಮಗಾರಿ: 2019ರಿಂದ 2022ರ ನಡುವಿನ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸವಳು-ಜವಳು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವ ಯೋಜನೆ, ಕಾಲುವೆಗಳ ನಿರ್ವಹಣೆ, ರಸ್ತೆ ದುರಸ್ತಿ ಕಾಮಗಾರಿ ಆರಂಭಗೊಂಡಿಲ್ಲ. ಕಳೆದ ಎರಡು ವರ್ಷದ ಅವಧಿಯಲ್ಲಿ 50 ಕೋಟಿ ರೂ. ಬಿಡುಗಡೆಯಾಗಿದ್ದು, 10 ಕೋಟಿ ರೂ. ಸಿಬ್ಬಂದಿ ವೇತನ, ಬಾಕಿ ಉಳಿದಿರುವ ಅನುದಾನದಲ್ಲಿ ತುರ್ತು ಕಾಮಗಾರಿ ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ 5.90 ಲಕ್ಷ ಹೆಕ್ಟೇರ್ ಸವಳು-ಜವಳು ಪ್ರದೇಶವನ್ನು ಸಮಗ್ರ ಅಭಿವೃದ್ಧಿ ಪಡಿಸಲು 2022-23ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಕಾಡಾ 150 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದೆ.
ಅಲ್ಲಲ್ಲಿ ಹಾಳಾದ ಕಾಲುವೆ: 5ನೇ ಪಂಚವಾರ್ಷಿಕ ಯೋಜನೆಯಡಿ 1980ರಲ್ಲಿ ಕಾರ್ಯಾರಂಭ ಮಾಡಿರುವ ಪ್ರಾಧಿಕಾರವು ಘಟಪ್ರಭಾ, ಮಲಪ್ರಭಾ, ಹಿಪ್ಪರಗಿ ಯೋಜನೆಗಳ ವ್ಯಾಪ್ತಿಯಲ್ಲಿ ಸುಮಾರು 12 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿದೆ. ಆದರೆ, ನಿರ್ಮಾಣಗೊಂಡಿರುವ ಕಾಲುವೆಗಳ ನಿರ್ವಹಣೆ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಘಟಪ್ರಭಾ ಎಡ ಮತ್ತು ಬಲದಂಡೆ ಕಾಲುವೆ ನಿರ್ಮಾಣಗೊಂಡು ಎರಡು ದಶಕಗಳೇ ಕಳೆದಿದೆ. ಕಾಲುವೆ ಅಲ್ಲಲ್ಲಿ ಹಾಳಾಗಿದ್ದರಿಂದ ರೈತರ ಕೃಷಿ ಜಮೀನುಗಳಿಗೆ
ಸಮರ್ಪಕವಾಗಿ ನೀರು ತಲುಪುತ್ತಿಲ್ಲ.
ಬೆಳಗಾವಿ, ಬಾಗಲಕೋಟೆ, ಗದಗ ಹಾಗೂ ಧಾರವಾಡ ಜಿಲ್ಲೆಗಳ ವ್ಯಾಪ್ತಿಯಲ್ಲಿ 5.79 ಲಕ್ಷ ಹೆಕ್ಟೇರ್ ಸವಳು-ಜವಳು ಪ್ರದೇಶ ಇದೆ. ಆದರೆ, ಈ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ವೆಚ್ಚ ಆಗಲಿದೆ. ಆದರೆ, ಸರ್ಕಾರವು ಬೇಡಿಕೆಗೆ ಅನುಗುಣವಾಗಿ ಅನುದಾನ ನೀಡದಿರುವ ಹಿನ್ನೆಲೆಯಲ್ಲಿ ಸವಳು-ಜವಳು ಭೂಮಿ ಅಭಿವೃದ್ಧಿಗೊಳ್ಳದಿರಲು ಪ್ರಮುಖ ಕಾರಣ ಎನ್ನಲಾಗಿದೆ.
ಕಾಡಾ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ 150 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಅನುದಾನದಲ್ಲಿಯೇ ಈ ವರ್ಷ 1,300 ಎಕರೆ ಸವಳು-ಜವಳು ಭೂಮಿಯನ್ನು ಅಭಿವೃದ್ಧಿ ಪಡಿಸಲಾಗಿದೆ.| ಶಶಿಧರ ಕುರೇರ ಆಡಳಿತಾಧಿಕಾರಿ, ಕಾಡಾಕೋವಿಡ್-19, ಅತಿವೃಷ್ಟಿ ಹಾಗೂ ಇನ್ನಿತರ ಕಾರಣಗಳಿಂದಾಗಿ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಗೆ ಎರಡು ವರ್ಷಗಳಿಂದ ಅನುದಾನ ನೀಡಿಲ್ಲ. ಈ ಬಾರಿ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಮೀಸಲಿಡಲಾಗುವುದು.| ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ