ಅಚ್ಚುಕಟ್ಟಾಗಿ ನಡೆದ ಮಸ್ಟರಿಂಗ್ ಕಾರ್ಯ

06 yerriswamy 01
Published on

ಬಳ್ಳಾರಿ : ಜಿಲ್ಲೆಯ ಕಂಪ್ಲಿ, ಬಳ್ಳಾರಿ ಗ್ರಾಮೀಣ ಹಾಗೂ ನಗರದ ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕಾರ್ಯ ಸೋಮವಾರ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಯಿತು.
ಕಂಪ್ಲಿ ಕ್ಷೇತ್ರಕ್ಕೆ ಸೆಂಟ್ ಫಿಲೊಮೀನಾ ಪಬ್ಲಿಕ್ ಸ್ಕೂಲ್, ಬಳ್ಳಾರಿ ನಗರ ಕ್ಷೇತ್ರಕ್ಕೆ ಕೋಟೆ ಪ್ರದೇಶದ ಸೇಂಟ್ ಜಾನ್ಸ್ ಜೂನಿಯರ್ ಕಾಲೇಜು ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮಸ್ಟರಿಂಗ್ ಕಾರ್ಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಡೆಯಿತು.
ಮಸ್ಟರಿಂಗ್ ಕಾರ್ಯವನ್ನು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ನೆರವೇರಿಸಲು ಪೂರ್ವಭಾವಿಯಾಗಿ ಯೋಜನೆ ರೂಪಿಸಿ, ಅದರಂತೆಯೇ ಕಾರ್ಯಗತಗೊಳಿಸಲಾಯಿತು. ಚುನಾವಣಾ ಸಾಮಗ್ರಿ ವಿತರಣೆ, ಮತಯಂತ್ರಗಳ ವಿತರಣೆ, ಚುನಾವಣೆಗೆ ಮತಗಟ್ಟೆಗಳಿಗೆ ನಿಯೋಜನೆ, ಚುನಾವಣಾ ಕರ್ತವ್ಯಕ್ಕೆ ತೆರಳಲು ಆಗಮಿಸಿದ್ದ ಅಧಿಕಾರಿ, ಸಿಬ್ಬಂದಿಗೆ ಕಾಲೇಜು ಆವರಣದಲ್ಲಿ ಕುಡಿಯುವ ನೀರು, ನೆರಳಿನ ಹಾಗೂ ಉಟೋಪಹಾರದ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಚಪಾತಿ, ಕಾಳು ಪಲ್ಯೆ, ಅನ್ನ ಸಾಂಬಾರ್ ಜತೆಗೆ, ಪಾಯಸದ ಸಿಹಿ ತಿನಿಸಿನ ವ್ಯವಸ್ಥೆ ಮಾಡಲಾಗಿತ್ತು. ಕಾಲೇಜು ಆವರಣದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ತಾವು ತೆರಳಬೇಕಿರುವ ಮತಗಟ್ಟೆಯ ವಿವರ ಹಾಗೂ ಬಸ್‌ಗಳ ವಿವರವನ್ನು ಧ್ವನಿವರ್ಧಕ ಮೂಲಕ ತಿಳಿಸುವ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಸಾಮಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್ ಯಂತ್ರದ ಪೆಟ್ಟಿಗೆ ಹಾಗೂ ವಿಶೇಷ ಕಿಟ್ ಬ್ಯಾಗ್ ಜತೆಗೆ ಹೆಲ್ತ್ ಕಿಟ್ ವಿತರಿಸಲಾಯಿತು. ಮತಗಟ್ಟೆಗಳಿಗೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿ ಜತೆಯಲ್ಲಿ ಬಂದೋಬಸ್ತ್‌ಗಾಗಿ ನಿಯೋಜಿತಗೊಂಡಿರುವ ಪೊಲೀಸರು, ಸಿಆರ್‌ಪಿಎಫ್ ಯೋಧರು, ಗೃಹರಕ್ಷಕ ದಳದವರು ತಮಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ಆಯಾ ಮಾರ್ಗದ ವಾಹನಗಳ ಮೂಲಕ ತೆರಳಿದರು.
ಸಾಮಾನ್ಯ ವೀಕ್ಷಕ ಚಂದ್ರಶೇಖರ ಸಖಮುರಿ, ಡಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ ನಗರದ ಕೋಟೆ ಪ್ರದೇಶದ ಸೇಂಟ ಜಾನ್ಸ್ ಜ್ಯೂನಿಯರ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net