

ಕಾರವಾರ: ನಿಜವಾದ ನಂಬಿಕೆಗೆ ತರ್ಕ, ಯುಕ್ತಿ, ಸಾಕ್ಷ್ಯಾಧಾರಗಳು ಇಲ್ಲ. ಆದರೂ ನಂಬಿಕೆ ಇಡುವುದು ನಿಜ. ಅಚಲವಾದ ನಂಬಿಕೆಗೆ ದೇವರನ್ನೂ ತನ್ನ ಮನೆ ಬಾಗಿಲಿಗೇ ಕರೆಸಿಕೊಳ್ಳಬಲ್ಲ ಶಕ್ತಿಯಿದೆ. ಅದಕ್ಕೆ ರಾಮಾಯಣದ ಶಬರಿ ಉತ್ತಮ ನಿದರ್ಶನ ಎಂದು ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಒಂಬತ್ತನೇ ದಿನವಾದ ಗುರುವಾರ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಶಬರಿಯ ನಂಬಿಕೆ ರಾಮನನ್ನು ಪಂಪಾತೀರಕ್ಕೆ ಕರೆ ತಂದಿತು. ಎಲ್ಲ ವೈಭೋಗ, ಸಂಬಂಧಗಳನ್ನು ತೊರೆದು ರಾಮನ ಬಳಿಗೆ ಬರುವ ವಿಭೀಷಣನದ್ದು ನಂಬಿಕೆಯ ಇನ್ನೊಂದು ಪರಿ. ರಾಮನನ್ನು ನೋಡದೇ ಇದ್ದರೂ ಆತನ ಮೇಲೆ ನಂಬಿಕೆ ಇಟ್ಟಿದ್ದ. ಕಪಿಸೈನ್ಯದ ವಿರೋಧದ ನಡುವೆಯೂ ವಿಭೀಷಣನನ್ನು ಸ್ವೀಕರಿಸಿದ್ದು, ರಾಮ ಭಕ್ತರ ಮೇಲೆ ಇರಿಸಿದ ನಂಬಿಕೆ ಎಂದು ಬಣ್ಣಿಸಿದರು.
ಬದುಕು ಭಾವದ ಮೇಲೆ ನಿಂತಿದೆ. ನಂಬಿಕೆ ಎನ್ನುವುದು ಭಾವಗಳಲ್ಲಿ ಅತ್ಯಂತ ಪ್ರಮುಖವಾದದ್ದು. ನಂಬಿಕೆಯಷ್ಟೇ ಅಪನಂಬಿಕೆಯೂ ಮುಖ್ಯ. ರಾಮಾಯಣವೆಲ್ಲ ನಂಬಿಕೆಯ ಮಾತು. ಎಲ್ಲರೂ ರಾಮನನ್ನು ನಂಬಿದ್ದಾರೆ. ರಾಮನೂ ಭಕ್ತರಿಗೆ ಕೆಲಸ ಕೊಡುವಾಗ ಭಕ್ತರ ಮೇಲೆ ಅಪಾರ ನಂಬಿಕೆ ಇಟ್ಟಿದ್ದ. ಇದು ಭಕ್ತ- ದೇವರ ನಡುವಿನ ಪರಸ್ಪರ ನಂಬಿಕೆಯ ಕಥೆ ಎಂದು ಬಣ್ಣಿಸಿದರು.
ಶಬರಿಯ ಭಕ್ತಿ ತರ್ಕಕ್ಕೆ ನಿಲುಕದ್ದು. ಕೈಕೇಯಿ ವರ ಬೇಡದಿದ್ದರೆ, ಭರತ ಚಿತ್ರಕೂಟಕ್ಕೆ ಬರದಿದ್ದರೆ ಶಬರಿಯ ಆಶ್ರಮಕ್ಕೆ ರಾಮ ಬರುವ ಪ್ರಮೇಯವೇ ಇರಲಿಲ್ಲ. ರಾಮನನ್ನು ಕಾಣದಿದ್ದರೂ, ರಾಮ ಬರುತ್ತಾನೆ ಎಂದು ಗುರುಗಳು ಹೇಳಿದ್ದನ್ನು ಶಬರಿ ನಂಬಿದ್ದಳು. ಹದಿನಾಲ್ಕನೇ ವರ್ಷದ ಆರಂಭದಲ್ಲಿ ಅಗಸ್ತ್ಯರ ಆಶ್ರಮಕ್ಕೆ ರಾಮ ಬರುತ್ತಾನೆ. ಪಂಚವಟಿಯಲ್ಲಿ ರಾಮ ಆಶ್ರಮ ಕಟ್ಟಿಕೊಂಡಿದ್ದ ಸಂದರ್ಭದಲ್ಲಿ ಸೀತಾಪಹರಣವಾಗುತ್ತದೆ. ಆಗ ದಕ್ಷಿಣಾಭಿಮುಖವಾಗಿ ಸೀತೆಯನ್ನು ಅರಸಿ ರಾಮ ಹೊರಡುತ್ತಾನೆ. ಅಂದರೆ ಸೀತಾಪಹರಣ ಆಗದಿದ್ದರೆ ಶಬರಿ ಆಶ್ರಮಕ್ಕೆ ರಾಮ ಬರುವ ಸಾಧ್ಯತೆಯೇ ಇರಲಿಲ್ಲ ಎಂದು ವಿವರಿಸಿದರು.
ಚಾತುರ್ಮಾಸ್ಯದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುವಾರ ಜಟಾಯು ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಿತು. ಜಿ.ಎಲ್.ಹೆಗಡೆ ಕುಮಟಾ (ರಾವಣ), ಮೋಹನ್ ಭಾಸ್ಕರ್ ಹೆಗಡೆ (ಜಟಾಯ), ಸುಬ್ರಹ್ಮಣ್ಯ ಮೂರೂರು (ರಾಮ), ವಿಶ್ವೇಶ್ವರ ಕಲ್ಲಬ್ಬೆ (ಸೀತೆ) ಶ್ರೋತೃಗಳ ಮನಗೆದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವೇಶ್ವರ ಮೂರೂರು, ಮೃದಂಗದಲ್ಲಿ ಗಜಾನನ ಕೋಣಾರೆ, ಚೆಂಡೆಯಲ್ಲಿ ಗಜಾನನ ಕತಗಾಲ ಭಾಗವಹಿಸಿದ್ದರು.