ಅಗ್ರಸೇನ ಸಿನಿಮಾ 23ರಂದು ತೆರೆಗೆ

IMG-20230616-WA0002.jpg
Published on

ದಾವಣಗೆರೆ: ಮುರುಗೇಶ್ ಕಣ್ಣಪ್ಪ ನಿರ್ದೇಶನದ, ಮಮತಾ ಜಯರಾಮ ರೆಡ್ಡಿ ನಿರ್ಮಾಣದ ‘ಅಗ್ರಸೇನ’ ಚಿತ್ರ, ಜೂ.23 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಾಯಕ ನಟ ಅಗಸ್ತ್ಯ ಬಳಗೆರೆ ತಿಳಿಸಿದರು.

ತಂದೆ-ಮಗನ ಬಾಂಧವ್ಯ ಮತ್ತು ಪ್ರೇಮಕಥೆ ಹೀಗೆ ಎರಡೂ ಟ್ರಾೃಕ್‌ನಲ್ಲಿ ಚಿತ್ರದ ಕಥೆ ಸಾಗುತ್ತದೆ. ಜನರು ಹಳ್ಳಿಗಳನ್ನು ಬಿಟ್ಟು ಪಟ್ಟಣಕ್ಕೆ ಹೋಗಬಾರದು ಎಂಬುದು ನಾಯಕನ ಸಿದ್ಧಾಂತವಾಗಿದ್ದು, ಹಳ್ಳಿಗಳು ಮತ್ತು ಪಟ್ಟಣದ ನಡುವಿನ ಸಂಬಂಧಗಳ ಬಗ್ಗೆ ಚಿತ್ರಿಸಿರುವ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ನಟ ರಾಮಕೃಷ್ಣ ಅವರ 200ನೇ ಸಿನಿಮಾ ಇದಾಗಿದೆ. ಅವರು ನಾಯಕನಟನ ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬೈಲಹೊಂಗಲದ ಐತಿಹಾಸಿಕ ಜಾಗದಲ್ಲಿ ಸೆಟ್ ಆಗಿ ಚಿತ್ರ ನಿರ್ಮಿಸಲಾಗಿದೆ. ಉಳಿದಂತೆ ಬೆಂಗಳೂರು, ಮೈಸೂರು, ಕೋಲಾರ ಮೊದಲಾದೆಡೆ ಚಿತ್ರೀಕರಣ ಮಾಡಲಾಗಿದೆ ಎಂದರು.

ಚಿತ್ರದಲ್ಲಿ ಮಳೆಯ ನಡುವೆಯೂ ಡೂಪ್ ಇಲ್ಲದೆ ಫೈಟ್ ಸೀನ್ ಮಾಡಿ ಸ್ಪೈನಲ್ ಕಾರ್ಡ್ ಸಮಸ್ಯೆಗೆ ಒಳಗಾಗಿದ್ದೆ. ವಿಭಿನ್ನ ಅಜ್ಜಿಯ ಪಾತ್ರವಿರುವ ಚಿತ್ರದಲ್ಲಿ ನನ್ನೊಂದಿಗೆ ಅಮರ್ ವಿರಾಜ್ ಕೂಡ ಚಿತ್ರದ ನಾಯಕನಟನಾಗಿ ಅಭಿನಯಿಸಿದ್ದಾರೆ. ರಚನಾ ದಶರಥ ಹಾಗೂ ಭಾರತಿ ಹೆಗಡೆ ಚಿತ್ರದ ನಾಯಕಿಯರು. ಹೊಸಬರ ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ನಟಿ ಮೀನಾಕ್ಷಿ ಮಾತನಾಡಿ, ಇದು ಹೊಸಬರ ಚಿತ್ರ ಎನ್ನುವುದಕ್ಕಿಂತ ಸಿನಿಮಾದ ಕಥೆ ಚೆನ್ನಾಗಿದ್ದು, ಮನೆ ಮಂದಿ ಮುಜುಗರವಿಲ್ಲದೆ ನೋಡಬಹುದು. ನಾಯಕನಟನ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕಿರುತೆರೆಯಲ್ಲಿ ಕೇವಲ ಮೂವರು ಹಳೆಯ ಕಲಾವಿದರಿಗೇ ತಾಯಿ ಪಾತ್ರ ನೀಡಲಾಗುತ್ತಿದೆ. ಮನೆಯಲ್ಲಿ ಕುಳಿತ ನನ್ನಂತಹ ಹೊಸ ಕಲಾವಿದರನ್ನೂ ಗುರುತಿಸಿ ಅವಕಾಶ ಕಲ್ಪಿಸಬೇಕಿದೆ ಎಂದರು.

ಚಿತ್ರದ ಕಲಾವಿದರಾದ ಆರ್‌ಜೆ ರಂಜಿತ್, ರವಿ, ರಘು ಹಾಗೂ ನಗರಪಾಲಿಕೆ ಸದಸ್ಯ ಎಸ್.ಟಿ.ವೀರೇಶ್ ಸುದ್ದಿಗೋಷ್ಠಿಯಲ್ಲಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net